ಗೌತಮ್​, ರೋಹಿತ್​ ಜತೆ Virat Kohli... Border-Gavaskar ಟ್ರೋಫಿಗೆ ಸಂಬಂಧಿಸಿದಂತೆ ಆಸೀಸ್​ ಮಾಜಿ ಆಟಗಾರನ ಹೇಳಿಕೆ ವೈರಲ್

Gauti, Rohit, Virat
Published on

ನವದೆಹಲಿ: ಸಾಮಾನ್ಯವಾಗಿ ನಾವು ನೋಡಿರುವಂತೆ ಯಾವುದಾದರು ಅಂತಾರಾಷ್ಟ್ರೀಯ ಟೂರ್ನಿ ಅಥವಾ ಸರಣಿ ಆರಂಭವಾಗುವುದಕ್ಕೂ ಮುನ್ನ ಉಭಯ ದೇಶಗಳ ಮಾಜಿ ಹಾಗೂ ಹಾಲಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಇವರುಗಳು ನೀಡುವ ವ್ಯಕ್ತಿರಿಕ್ತ ಹೇಳಕೆಗಳು ಉಭಯ ದೇಶಗಳ ಕ್ರೀಡಾಭಿಮಾನಿಗಳನ್ನು ಕೆರಳಿ ಕೆಂಡವಾಗಿಸುತ್ತದೆ. ಇದೀಗ ಮುಂಬರುವ ಬಾರ್ಡರ್​-ಗವಾಸ್ಕರ್​ ಟ್ರೋಫಿ (Border-Gavaskar Trophy) ಕುರಿತಂತೆ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಮಾಜಿ ಆಲ್ರೌಂಡರ್​ ಬ್ರೆಂಡನ್​​ ಜೂಲಿಯನ್​ ​ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಬೆಂಡ್ರನ್​ ಜೂಲಿಯನ್​, ನನ್ನ ಪ್ರಕಾರ ಪರ್ತ್​ನಲ್ಲಿ ನಡೆಯಲಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಸಂಪೂರ್ಣ ಮೇಲುಗೈ ಸಾಧಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಆತಿಥೇಯರು ನಾಲ್ಕು ದಿನಕ್ಕೂ ಮೊದಲೇ ಪಂದ್ಯವನ್ನು ಜಯಿಸುತ್ತಾರೆ ಎಂಬ ನಂಬಿಕೆ ನನಗಿದೆ. ಏಕೆಂದರೆ ಮೊದಲ ಟೆಸ್ಟ್​ ಪಂದ್ಯದಲ್ಲಿ ರೋಹಿತ್​ ಶರ್ಮ ಆಡದಿರುವುದು ನಮಗೆ ವರದಾನವಾಗಿದ್ದು, ತಂಡವನ್ನು ಜಸ್ಪ್ರೀತ್​ ಬುಮ್ರಾ ಮುನ್ನಡೆಸುತ್ತಾರೆ. ಜಸ್ಪ್ರೀತ್​ ಬುಮ್ರಾ ಓರ್ವ ಅದ್ಭುತ ಆಟಗಾರನಾಗಿದ್ದು, ಆತ ನಾಯಕತ್ವ ಹಾಗೂ ಬೌಲಿಂಗ್​ಅನ್ನು ನಿಭಾಯಿಸವೇಕಿದೆ. ಹೀಗಾಗಿ ಸ್ವಲ್ಪಮಟ್ಟಿಗೆ ಕಷ್ಟವಾಗಬಹುದು ಎಂದು ಭಾವಿಸುತ್ತೇನೆ.

ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ವಿರಾಟ್​ ಕೊಹ್ಲಿ ಔಟಾದ ರೀತಿ ನಂಬಲು ಅಸಾಧ್ಯವಾಗಿದ್ದು, ಆತನ ಫಾರ್ಮ್​ ಅತ್ಯುತ್ತಮ ಸ್ಥಿತಿಯಲ್ಲಿಲ್ಲ ಎಂಬುದು ಗೋಚರಿಸುತ್ತದೆ. ನನ್ನ ಪ್ರಕಾರ ಆತ ಕೋಚ್​ ಹಾಗೂ ನಾಯಕನನ್ನು ಗೇಲಿ ಮಾಡುತ್ತಿಲ್ಲ. ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಆತ ಹೇಗೆ ಆಡಲಿದ್ದಾನೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ನನ್ನ ಪ್ರಕಾರ ಆತಿಥೇಯರು ಮೇಲುಗೈ ಸಾಧಿಸಲಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಮಾಜಿ ಆಲ್ರೌಂಡರ್​ ಬ್ರೆಂಡನ್​​ ಜೂಲಿಯನ್​ ​ಹೇಳಿದ್ದಾರೆ.

Brendon Julian

ರಾಹುಲ್​ ದ್ರಾವಿಡ್​ (Rahul Dravid) ಬಳಿಕ ಟೀಮ್​ ಇಂಡಿಯಾದ ಕೋಚ್​ ಆಗಿ ಗೌತಮ್​ ಗಂಭೀರ್ (Gautam Gambhir)​ ಅಧಿಕಾರ ವಹಿಸಿಕೊಂಡಿದ್ದು, ಇವರು ರಾಷ್ಟ್ರೀಯ ಕೋಚ್​ ಆಗಿ ಬಡ್ತಿ ಪಡೆದ ಬಳಿಕ ಭಾರತ ತಂಡಕ್ಕೆ ಸಿಹಿಗಿಂತ ಹೆಚ್ಚಾಗಿ ಕಹಿಯೇ ಲಭಿಸಿದೆ. ಗೌತಮ್​ ಗಂಭೀರ್ (Gautam Gambhir)​ ಕೋಚ್​ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ವೈಟ್​ವಾಷ್​ ಆಗುವ ಮೂಲಕ ಭಾರತ ತಂಡ ತೀವ್ರ ಮುಖಭಂಗವನ್ನು ಅನುಭವಿಸಿತ್ತು. ಇದಾದ ಬಳಿಕ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಗೆದ್ದು ಬೀಗಿತ್ತಾದರು, ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ವೈಟ್​ವಾಷ್​ ಆಗುವ ಮೂಲಕ ತೀವ್ರ ಮುಖಭಂಗವನ್ನು ಅನುಭವಿಸಿ ಬೇಡದ ದಾಖಲೆಗಳಿಗೆ ಕೊರಳೊಡ್ಡಿತ್ತು. ಇದೀಗ ನವೆಂಬರ್​ 22ರಿಂದ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಲಿರುವ ಬಾರ್ಡರ್​-ಗವಾಸ್ಕರ್​ ಟ್ರೋಫಿ ಮೇಲೆ ಎಲ್ಲರು ಕಣ್ಣು ನೆಟ್ಟಿದ್ದು, ಈ ಸರಣಿಯಲ್ಲಿ ಭಾರತದ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವೆ ನಡೆಯಲಿರುವ 5 ಪಂದ್ಯಗಳ ಬಾರ್ಡರ್​-ಗವಾಸ್ಕರ್ (Border-Gavaskar)​ ಟೆಸ್ಟ್​ ಸರಣಿಯೂ ನವೆಂಬರ್​ 22ಕ್ಕೆ ಆರಂಭವಾಗಲಿದ್ದು, ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net