

ಬೆಂಗಳೂರು: ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆಂದು ಎಂದು ಹೇಳಿ ವಿವಾದವನ್ನು ಹುಟ್ಟು ಹಾಕಿದ್ದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ (Narayana Murthy) ಇದೀಗ ಮತ್ತೊಮ್ಮೆ ತಮ್ಮ ಹಳೆಯ ಹೇಳಿಕೆಯನ್ನು ಪುನರುಚ್ಚರಿಸಿದ್ದು, ದೇಶದ ಯುವಕರು ವಾರಕ್ಕೆ 70 ಗಂಟೆ ಕಲಸ ಮಾಡಬೇಕೆಂದು ಪ್ರತಿಪಾದಿಸಿದ್ದಾರೆ.
ಸಿಎನ್ಬಿಸಿ ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ನಾರಾಯಣಮೂರ್ತಿ (Narayana Murthy), ಸಮತೋಲನದಲ್ಲಿ ಕೆಲಸ ಮಾಡುವುದನ್ನು ನಾನು ನಂಬಿವುದಿಲ್ಲ. 1986 ರಲ್ಲಿ ನನಗೆ ದೊಡ್ಡ ಶಾಕ್ ಆಗಿತ್ತು. ಆಗ ಭಾರತದಲ್ಲಿ ಐಟಿ ಹಾಗೂ ಇತರ ಕೆಲ ವಲಯಗಳಲ್ಲಿ ವಾರದ ಆರು ದಿನ ಬದಲು 5 ದಿನ ಕೆಲಸ ಮಾಡುವ ನೀತಿ ತರಲಾಯಿತು. ಇದರಿಂದ ನಾನು ವಿಚಲಿತನಾಗಿದ್ದೆ. ದಯವಿಟ್ಟು ಕ್ಷಮಿಸಿ. ಕೆಲಸದ ಅವಧಿ ಬಗ್ಗೆ ನಾನು ಸತ್ತರೂ ನನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವುದಿಲ್ಲ.
ಕಠಿಣ ಪರಿಶ್ರಮವೇ ದೇಶದ ಅಭಿವೃದ್ಧಿಗೆ ಮೂಲಾಧಾರ. ಪ್ರಧಾನಿ ಮೋದಿ (PM Narendra Modi) ಅವರು ವಾರಕ್ಕೆ 100 ಗಂಟೆವರೆಗೆ ಕೆಲಸ ಮಾಡುತ್ತಾರೆ. ಅವರಿಗೆ ಈ ದೇಶದ ಯುವಕರು ಮೆಚ್ಚುಗೆ ಸೂಚಿಸಬೇಕಾದರೆ ಅವರಂತೆಯೇ ವಾರಕ್ಕೆ ಕನಿಷ್ಠ 70 ತಾಸಾದರೂ ಕೆಲಸ ಮಾಡಬೇಕು. ನಾನು ನನ್ನ ವೃತ್ತಿ ಜೀವನದ ಆರಂಭದಲ್ಲಿ ದಿನಕ್ಕೆ 14 ಗಂಟೆ ಕೆಲಸ ಮಾಡುತ್ತಿದ್ದೆ. ಬೆಳಿಗ್ಗೆ 6.30 ಕ್ಕೆ ಕಚೇರಿಯಲ್ಲಿ ಹಾಜರಿರುತ್ತಿದ್ದೆ. ರಾತ್ರಿ 8–30 ಕ್ಕೆ ಮನೆಗೆ ಹೊರಡುತ್ತಿದ್ದೆ. ಸಮರ್ಪಣೆಯಿಂದ ಕೆಲಸ ಮಾಡುತ್ತಿದ್ದೆ. ಕಠಿಣ ಪರಿಶ್ರಮವು ನಮ್ಮ ಸಂಸ್ಕೃತಿಯಲ್ಲೇ ಇದೆ ಎಂದು ಹೇಳಿದ್ದಾರೆ.
ಜರ್ಮನಿ, ಜಪಾನ್ ದೇಶದವರು ಕಠಿಣ ಪರಿಶ್ರಮದಿಂದಲೇ ದೇಶ ಕಟ್ಟಿದರು. ಅದಕ್ಕೆ ಪರ್ಯಾಯ ಯಾವುದೂ ಇಲ್ಲ. ಪ್ರತಿಭಾವಂತರು ದಿನಕ್ಕೆ ಕನಿಷ್ಠ 10 ತಾಸು ಕೆಲಸ ಮಾಡಬೇಕು. ಅಂದಾಗ ನಮ್ಮ ದೇಶ ಸಾಕಷ್ಟು ಅಭಿವೃದ್ಧಿ ಹೊಂದುತ್ತದೆ ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯನಮೂರ್ತಿ (Narayana Murthy) ಸಿಎನ್ಬಿಸಿ ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟಿದ್ದಾರೆ.