

ಜೈಪುರ: ಇಲ್ಲಿನ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 17ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ಸೆಣಸಾಡುತ್ತಿದ್ದು, ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್ಸಿಬಿ ಪಾಲಿಗೆ ಈ ಪಂದ್ಯ ಮಹತ್ವವೆನ್ನಿಸಿದೆ. ಇತ್ತ ರಾಜಸ್ಥಾನ ತಂಡವು ಪ್ರಸ್ತುತ ಟೂರ್ನಿಯಲ್ಲಿ ಅಜೇಯವಾಗಿದ್ದು, ಇದುವರೆಗೆ ಆಡಿರುವ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಗೆಲುವಿನ ಹಂಬಲದಲ್ಲಿರುವ ಆರ್ಸಿಬಿ, ಸೋಲೇ ಕಾಣದ ರಾಜಸ್ಥಾನಕ್ಕೆ ಈ ಪಂದ್ಯ ಬಹಳ ಮುಖ್ಯವಾಗಿದೆ.
ಹಾಲಿ ಐಪಿಎಲ್ ಋತುವಿನಲ್ಲಿ ಆರ್ಸಿಬಿ ಪರ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ವಿರಾಟ್ ಕೊಹ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ 67.67 ಸರಾಸರಿಯಲ್ಲಿ 203 ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪನ್ನು ತಮ್ಮದಾಗಿಸಿಕೊಂಡಿದ್ದಾರೆ. ಉತ್ತಮ ಲಯದಲ್ಲಿರುವ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲೂ ತಮ್ಮ ಫಾರ್ಮ್ ಮುಂದುವರೆಸಿದರೆ ಮೂರು ದಾಖಲೆಗಳು ತಮ್ಮದಾಗಿಸಿಕೊಳ್ಳಲಿದ್ದಾರೆ.
ರಾಜಸ್ಥಾನ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಇನ್ನೂ 34 ರನ್ ಕಲೆಹಾಕಿದರೆ, ಐಪಿಎಲ್ನಲ್ಲಿ 7500 ರನ್ ಪೂರೈಸಲಿದ್ದಾರೆ. ಇದುವರೆಗೆ ಕೊಹ್ಲಿ ಐಪಿಎಲ್ನಲ್ಲಿ ಆಡಿರುವ 241 ಪಂದ್ಯಗಳಲ್ಲಿ 7466 ರನ್ ಬಾರಿಸಿದ್ದು, ಐಪಿಎಲ್ನಲ್ಲಿ ಅಧಿಕ ರನ್ ಬಾರಿಸಿರುವ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಲಿದ್ದಾರೆ.
ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 62 ರನ್ ಗಳಿಸಿದರೆ, ರಾಜಸ್ಥಾನ ರಾಯಲ್ಸ್ ವಿರುದ್ಧ ಅತ್ಯಧಿಕ ರನ್ ಬಾರಿಸಿರುವ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ. ಕೊಹ್ಲಿ ರಾಜಸ್ಥಾನ್ ವಿರುದ್ಧ ಇದುವರೆಗೆ 29 ಪಂದ್ಯಗಳಲ್ಲಿ 618 ರನ್ ಬಾರಿಸಿದ್ದಾರೆ. ಪ್ರಸ್ತುತ, ರಾಜಸ್ಥಾನ ರಾಯಲ್ಸ್ ವಿರುದ್ಧ ಐಪಿಎಲ್ನಲ್ಲಿ 679 ರನ್ ಬಾರಿಸಿರುವ ಶಿಖರ್ ಧವನ್ ಅಗ್ರಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಕೊಹ್ಲಿ ಪ್ರಸ್ತುತ 5ನೇ ಸ್ಥಾನದಲ್ಲಿದ್ದು, ಕೊಹ್ಲಿಗಿಂತ ಮೊದಲು ಎಬಿ ಡಿವಿಲಿಯರ್ಸ್, ಕೆಎಲ್ ರಾಹುಲ್, ಸುರೇಶ್ ರೈನಾ ಮತ್ತು ದಿನೇಶ್ ಕಾರ್ತಿಕ್ ಇದ್ದಾರೆ.
ಐಪಿಎಲ್ ಆರಂಭವಾದಾಗಿನಿಂದಲೂ ಆರ್ಸಿಬಿ ಪರ ಆಡುತ್ತಿರುವ ವಿರಾಟ್ ಇಂದಿನ ಪಂದ್ಯದಲ್ಲಿ 110 ರನ್ ಸಿಡಿಸಲು ಸಾಧ್ಯವಾದರೆ ಟಿ20 ಕ್ರಿಕೆಟ್ನಲ್ಲಿ ಒಂದೇ ತಂಡದ ಪರ 8000 ಕ್ಕೂ ಅಧಿಕ ರನ್ ಬಾರಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಆರ್ಸಿಬಿ ಪರ 241 ಪಂದ್ಯ ಮತ್ತು ಚಾಂಪಿಯನ್ಸ್ ಲೀಗ್ನಲ್ಲಿ 15 ಪಂದ್ಯಗಳನ್ನು ಆಡಿದ್ದಾರೆ. ಒಟ್ಟಾರೆಯಾಗಿ ಆರ್ಸಿಬಿ ಪರ 256 ಪಂದ್ಯಗಳನ್ನಾಡಿರುವ ವಿರಾಟ್, 37.75 ಸರಾಸರಿಯಲ್ಲಿ 7890 ರನ್ ಬಾರಿಸಿದ್ದಾರೆ. ಇದೀಗ ಈ ತಂಡದ ಪರ 8000 ರನ್ಗಳ ಗಡಿಯನ್ನು ಮುಟ್ಟಲು ಕೊಹ್ಲಿಗೆ ಇನ್ನೂ 110 ರನ್ಗಳ ಅಗತ್ಯವಿದೆ. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಈ ಮಹತ್ವದ ಮೈಲಿಗಲ್ಲನ್ನು ಸಾಧಿಸಲಿದ್ದಾರ ಎಂದು ಕಾದು ನೋಡಬೇಕಿದೆ.