ಕೊಹ್ಲಿ ವಿಚಾರದಲ್ಲಿ ಇದು ನಿಜವಾದರೆ ಆರ್​ಸಿಬಿ ಅಭಿಮಾನಿಗಳಿಗೆ ಅದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ!

Virat Kohli
Published on

ನವದೆಹಲಿ: ಟೀಮ್​ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಬಳಿಕ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅಂತಾರಾಷ್ಟ್ರೀಯ ಟಿ20 ಮಾದರಿ ಪಂದ್ಯಗಳಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಹೀಗಾಗಿ ಬಿಸಿಸಿಐ ಹೊಸ ನಾಯಕನನ್ನು ಆಯ್ಕೆ ಮಾಡಲು ಆರಂಭಿಸಿದೆ. ಹಾರ್ದಿಕ್​ ಪಾಂಡ್ಯ, ಶುಭಮನ್ ಗಿಲ್ ಮತ್ತು ರುತುರಾಜ್ ಗಾಯಕ್ವಾಡ್ ಜತೆಗೆ ಹಿರಿಯ ಬೌಲರ್ ಜಸ್ಪ್ರೀತ್ ಬುಮ್ರಾ ಹೆಸರು ಕೂಡ ರೇಸ್‌ನಲ್ಲಿ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಹೆಸರು ಸಹ ಕೇಳಿಬರುತ್ತಿದೆ. ಇದರಿಂದ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಆದರೆ ಇದು ಟೀಮ್ ಇಂಡಿಯಾಗೆ ಸಂಬಂಧಿಸಿದ್ದಲ್ಲ.

ಟೀಮ್ ಇಂಡಿಯಾದ ರನ್ ಮೆಶಿನ್​, ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯನ್ನು ಮತ್ತೊಮ್ಮೆ ನಾಯಕನನ್ನಾಗಿ ನೋಡುವ ಸಾಧ್ಯತೆಗಳು ಹೆಚ್ಚಿವೆ. ಆದರೆ, ಅದು ಟೀಮ್ ಇಂಡಿಯಾದಲ್ಲಿ ಅಲ್ಲ, ಬದಲಾಗಿ ಐಪಿಎಲ್​ನಲ್ಲಿ.

ಹೌದು, 17 ವರ್ಷಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿರುವ ಕೊಹ್ಲಿ ಈ ಹಿಂದೆಯೂ ಆರ್​ಸಿಬಿ ನಾಯಕರಾಗಿದ್ದರು. ತಂಡವನ್ನು ಅದ್ಭುತವಾಗಿ ಮುನ್ನಡೆಸುವಲ್ಲಿ ಯಶಸ್ವಿಯಾದರು. ಇದೀಗ ಮತ್ತೊಮ್ಮೆ ಕೊಹ್ಲಿಗೆ ತಂಡದ ಸಾರಥ್ಯ ನೀಡುವ ನಿರೀಕ್ಷೆಯಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಅದಕ್ಕೆ ಕಾರಣಗಳೂ ಇವೆ. ಈ ಹಿಂದೆ ಕೊಹ್ಲಿ ಆರ್‌ಸಿಬಿ ನಾಯಕರಾಗಿದ್ದಾಗ ಅದೇ ಸಮಯದಲ್ಲಿ ಟೀಮ್​ ಇಂಡಿಯಾದ ಟಿ20 ನಾಯಕರು ಸಹ ಆಗಿದ್ದರು. ಒತ್ತಡದಿಂದಾಗಿ ಅವರು ಐಪಿಎಲ್ ನಾಯಕತ್ವದಿಂದ ಕೆಳಗಿಳಿದರು.

ಇದೀಗ ಸಂಪೂರ್ಣವಾಗಿ ಟಿ20 ಮಾದರಿಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿ ಸದ್ಯ ಯಾವುದೇ ಜವಾಬ್ದಾರಿಯಲ್ಲಿಲ್ಲ. ಹೀಗಾಗಿ ಯಾವುದೇ ಒತ್ತಡವೂ ಇಲ್ಲ. ಮೇಲಾಗಿ ಕಳೆದ ಕೆಲವು ಸೀಸನ್‌ಗಳಲ್ಲಿ ಆರ್‌ಸಿಬಿ ನಾಯಕರಾಗಿದ್ದ ಡುಪ್ಲೆಸಿಸ್‌ಗೆ ಇದೀಗ 39 ವರ್ಷ. ವಯಸ್ಸು ಹೆಚ್ಚಾಗಿರುವ ಕಾರಣ ನಾಯಕನಾಗಿ ಮುಂದುವರಿಯುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಐಪಿಎಲ್ 2025ರಲ್ಲಿ ವಿರಾಟ್ ಕೊಹ್ಲಿಯನ್ನು ನಾಯಕನಾಗಿ ನೋಡಲು ಅಭಿಮಾನಿಗಳು ಆಶಿಸುತ್ತಿದ್ದಾರೆ.

ಐಪಿಎಲ್ 2016ರ ಋತುವಿನಲ್ಲಿ ಆರ್‌ಸಿಬಿ ನಾಯಕರಾಗಿದ್ದ ಕೊಹ್ಲಿ, ಆ ವರ್ಷ ತಮ್ಮ ತಂಡವನ್ನು ಫೈನಲ್‌ಗೆ ಮುನ್ನಡೆಸಿದರು. ಅಲ್ಲದೆ, ಮೂರು ಬಾರಿ ಪ್ಲೇ ಆಫ್‌ಗೆ ತಲುಪಿಸಿದರು. ನಾಯಕನಾಗಿಯೂ ವಿರಾಟ್ ಕೊಹ್ಲಿ ಗಟ್ಟಿಯಾದ ದಾಖಲೆ ಹೊಂದಿರುವುದರಿಂದ ಮುಂದಿನ ಋತುವಿನಲ್ಲಿ ನಾಯಕತ್ವವನ್ನು ಅವರಿದೆ ಹಸ್ತಾಂತರಿಸುವ ನಿರೀಕ್ಷೆಯಲ್ಲಿ ಮ್ಯಾನೇಜ್‌ಮೆಂಟ್ ಇದೆ. ಒಂದು ವೇಳೆ ಇದು ನಿಜವಾದರೆ ಆರ್​ಸಿಬಿ ಅಭಿಮಾನಿಗಳಿಗೆ ಇದ್ದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ ಅಂತಾನೇ ಹೇಳಬಹುದು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net