ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 16 ವರ್ಷ ಪೂರೈಸಿದ ವಿರಾಟ್​ ಕೊಹ್ಲಿ; ಇನ್ನೂ ಕಾಡುತ್ತಿದೆ ಅದೊಂದು ಪ್ರಶಸ್ತಿಯ ಕೊರತೆ!

web kohli
Published on

ಬೆಂಗಳೂರು: ಟೀಮ್​ ಇಂಡಿಯಾ ಮಾಜಿ ನಾಯಕ ಹಾಗೂ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಭಾನುವಾರ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 16 ವರ್ಷ ಪೂರೈಸಿದ ಸಂಭ್ರಮ ಕಂಡರು. 2008ರ ಆಗಸ್ಟ್​ 18ರಂದು ಶ್ರೀಲಂಕಾ ವಿರುದ್ಧ ಡಂಬುಲಾದಲ್ಲಿ ಏಕದಿನ ಪಂದ್ಯ ಆಡುವ ಮೂಲಕ 19 ವರ್ಷದ ಯುವ ಬ್ಯಾಟ್ಸ್​ಮನ್​ ಆಗಿ ಅವರು ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದರು. ಕಳೆದ 16 ವರ್ಷಗಳಲ್ಲಿ ಭಾರತ ತಂಡದ ಪರ ಮೂರೂ ಪ್ರಕಾರಗಳಲ್ಲಿ ಒಟ್ಟು 533 ಪಂದ್ಯ ಆಡಿರುವ ಕೊಹ್ಲಿ, ಸುಮಾರು 27 ಸಾವಿರ ರನ್​ ಬಾರಿಸಿದ್ದಾರೆ.

35 ವರ್ಷದ ವಿರಾಟ್​ ಕೊಹ್ಲಿ ಮೊದಲ ಪಂದ್ಯದಲ್ಲಿ ಆರಂಭಿಕನಾಗಿ ಗೌತಮ್​ ಗಂಭೀರ್​ ಜತೆಗೆ ಇನಿಂಗ್ಸ್​ ಆರಂಭಿಸಿ ಕೇವಲ 12 ರನ್​ ಗಳಿಸಿದ್ದರು. ಭಾರತ ತಂಡ 146 ರನ್​ಗೆ ಆಲೌಟ್​ ಆಗಿದ್ದ ಪಂದ್ಯದಲ್ಲಿ 8 ವಿಕೆಟ್​ಗಳಿಂದ ಸೋಲು ಕಂಡಿತ್ತು.

ಕೊಹ್ಲಿ ಇದುವರೆಗೆ 113 ಟೆಸ್ಟ್​, 295 ಏಕದಿನ ಮತ್ತು 125 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 8848, 13906 ಮತ್ತು 4188 ರನ್​ ಬಾರಿಸಿದ್ದಾರೆ. ಟೆಸ್ಟ್​ನಲ್ಲಿ 29, ಏಕದಿನದಲ್ಲಿ 50 ಮತ್ತು ಟಿ20ಯಲ್ಲಿ 1 ಶತಕಗಳ ಸಹಿತ ಒಟ್ಟು 80 ಶತಕ ಸಿಡಿಸಿದ್ದಾರೆ. 2011ರಲ್ಲಿ ಏಕದಿನ ವಿಶ್ವಕಪ್​, 2013ರಲ್ಲಿ ಚಾಂಪಿಯನ್ಸ್​ ಟ್ರೋಫಿ, ಹಾಲಿ ವರ್ಷ ಟಿ20 ವಿಶ್ವಕಪ್​ ಗೆದ್ದಿರುವ ಕೊಹ್ಲಿಗೆ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಒಂದೇ ಇನ್ನೂ ಒಲಿಯಲಿರುವ ಐಸಿಸಿ ಟ್ರೋಫಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net