ಮಹಾರಾಜ ಟ್ರೋಫಿಯಲ್ಲಿ ಸ್ಮರಣ್​ ಶತಕದಾಟ; ಗುಲ್ಬರ್ಗಾ ಮಿಸ್ಟಿಕ್ಸ್​​ಗೆ ಕೊನೇ ಎಸೆತದಲ್ಲಿ ರೋಚಕ ಗೆಲುವು

web glb vs mys
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಯುವ ಎಡಗೈ ಬ್ಯಾಟರ್​ ಆರ್​. ಸ್ಮರಣ್​ (104*ರನ್​, 60 ಎಸೆತ, 11 ಬೌಂಡರಿ, 4 ಸಿಕ್ಸರ್​) ಭರ್ಜರಿ ಶತಕದ ಬಲದಿಂದ ಗುಲ್ಬರ್ಗಾ ಮಿಸ್ಟಿಕ್ಸ್​ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಹಾಲಿ ರನ್ನರ್​ಅಪ್​ ಮೈಸೂರು ವಾರಿಯರ್ಸ್​ಗೆ 3 ವಿಕೆಟ್​ಗಳಿಂದ ಆಘಾತಕಾರಿ ಸೋಲುಣಿಸಿದೆ. ದೇವದತ್​ ಪಡಿಕ್ಕಲ್​ ಬಳಗ ಟೂರ್ನಿಯ ಆರಂಭಿಕ 2 ಪಂದ್ಯಗಳ ಸೋಲಿನ ಬಳಿಕ ಮೊದಲ ಗೆಲುವಿನ ಸಂಭ್ರಮ ಕಂಡಿತು.

ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಮೈಸೂರು ತಂಡ ನಾಯಕ ಕರುಣ್​ ನಾಯರ್​ (66 ರನ್​, 35 ಎಸೆತ, 8 ಬೌಂಡರಿ, 3 ಸಿಕ್ಸರ್​) ಅರ್ಧಶತಕದಾಟದಿಂದ 8 ವಿಕೆಟ್​ಗೆ 196 ರನ್​ ಪೇರಿಸಿತು. ಪ್ರತಿಯಾಗಿ ಗುಲ್ಬರ್ಗಾ ತಂಡ ಮೊದಲ 7 ಎಸೆತಗಳಲ್ಲೇ ಇಬ್ಬರೂ ಆರಂಭಿಕರನ್ನು ಕಳೆದುಕೊಂಡರೂ, ಆರ್​. ಸ್ಮರಣ್​ ದಿಟ್ಟ ಹೋರಾಟದಿಂದ 7 ವಿಕೆಟ್​ಗೆ 200 ರನ್​ ಗಳಿಸಿ ಜಯಿಸಿತು. ಕೊನೇ ಎಸೆತದಲ್ಲಿ ಗೆಲುವಿಗೆ 1 ರನ್​ ಬೇಕಿದ್ದಾಗ ಸ್ಮರಣ್​ ಬೌಂಡರಿ ಬಾರಿಸಿ ಗೆಲ್ಲಿಸಿದರು. ಮನೋಜ್​ ಭಾಂಡಗೆ ಎಸೆದ ಕೊನೇ ಓವರ್​ನಲ್ಲಿ 10 ರನ್​ ಬೇಕಿದ್ದಾಗ ಸ್ಮರಣ್​ ಮೊದಲ 2 ಎಸೆತಗಳಲ್ಲಿ 3 ರನ್​ ಗಳಿಸಿ ಶತಕ ಪೂರೈಸಿದರು. ನಂತರದ 2 ಎಸೆತಗಳಲ್ಲಿ ರಿತೇಶ್​ ಭಟ್ಕಳ್​ 6 ರನ್​ ಗಳಿಸಿ, ಓವರ್​ನ 5ನೇ ಎಸೆತದಲ್ಲಿ ರನೌಟಾದರು.

ಗಮನಸೆಳೆದ ಸಮಿತ್​ ದ್ರಾವಿಡ್​

ಟೀಮ್​ ಇಂಡಿಯಾ ಮಾಜಿ ಕೋಚ್​, ದಿಗ್ಗಜ ಬ್ಯಾಟರ್​ ರಾಹುಲ್​ ದ್ರಾವಿಡ್​ ಪುತ್ರ ಸಮಿತ್​ ದ್ರಾವಿಡ್​ 24 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್​ ಸಹಿತ 33 ರನ್​ ಸಿಡಿಸಿ ಗಮನಸೆಳೆದರು. ಮೈಸೂರು 18 ರನ್​ಗಳಿಗೆ ಆರಂಭಿಕರಿಬ್ಬರನ್ನು ಕಳೆದುಕೊಂಡು ಆಘಾತ ಎದುರಿಸಿದಾಗ ಸಮಿತ್​, ನಾಯಕ ಕರುಣ್​ ನಾಯರ್​ ಜತೆಗೂಡಿ 3ನೇ ವಿಕೆಟ್​ಗೆ 83 ರನ್​ ಜತೆಯಾಟವಾಡಿ ಚೇತರಿಕೆ ಒದಗಿಸಿದರು. 18 ವರ್ಷದ ಸಮಿತ್​ ಟೂರ್ನಿಯ ಮೊದಲ 2 ಪಂದ್ಯಗಳಲ್ಲಿ ತಲಾ 7 ರನ್​ ಗಳಿಸಿದ್ದರು.

ಮೈಸೂರು ವಾರಿಯರ್ಸ್​: 8 ವಿಕೆಟ್​ಗೆ 196 (ಕರುಣ್​ 66, ಸಮಿತ್​ 33, ಸುಮಿತ್​ 19, ಭಾಂಡಗೆ 0, ಜೆ. ಸುಚಿತ್​ 40, ಕೆ. ಗೌತಮ್​ 10, ಮೋನಿಷ್​ 25ಕ್ಕೆ 2, ಪೃಥ್ವಿರಾಜ್​ 28ಕ್ಕೆ 2, ಯಶೋವರ್ಧನ್​ 31ಕ್ಕೆ 2). ಗುಲ್ಬರ್ಗಾ ಮಿಸ್ಟಿಕ್ಸ್​: 7 ವಿಕೆಟ್​ಗೆ 200 (ಪಡಿಕ್ಕಲ್​ 1, ಸ್ಮರಣ್​ 104, ಪ್ರವಿಣ್​ ದುಬೆ 37, ಭಾಂಡಗೆ 40ಕ್ಕೆ 2, ವಿದ್ಯಾಧರ್​ 42ಕ್ಕೆ 2). ಪಂದ್ಯಶ್ರೇಷ್ಠ: ಸ್ಮರಣ್​ ಆರ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net