

AB de Villiers: ಕಳೆದ ವರ್ಷ ನಡೆದ ಐಪಿಎಲ್ ಹರಾಜಿನಲ್ಲಿ ಉತ್ತಮ ಖರೀದಿಯನ್ನೇ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ, ಈ ವರ್ಷವಾದರೂ ಟ್ರೋಫಿ ಗೆಲ್ಲಬೇಕೆಂಬ ನಿರೀಕ್ಷೆಯಲ್ಲಿದೆ. ಸ್ಟಾರ್ ಹಾಗೂ ಯುವ ಆಟಗಾರರನ್ನೇ ತನ್ನ ತೆಕ್ಕೆಗೆ ಕರೆದುಕೊಂಡಿರುವ ಆರ್ಸಿಬಿ, ಹೊಸ ಬಲಿಷ್ಠ ತಂಡದೊಂದಿಗೆ ಮಾರ್ಚ್ 21ರಿಂದ ಆರಂಭವಾಗಲಿರುವ ಐಪಿಎಲ್ ಅಖಾಡಕ್ಕಿಳಿಯಲು ಸಜ್ಜಾಗುತ್ತಿದೆ. ಈ ಮಧ್ಯೆ ಫ್ರಾಂಚೈಸಿಗೆ ಕಾಡುತ್ತಿರುವ ಒಂದೇ ಒಂದು ಗೊಂದಲ ಎಂದರೆ ಅದು ಕ್ಯಾಪ್ಟನ್ ಜವಾಬ್ದಾರಿ. ಈ ಸ್ಥಾನವನ್ನು ಯಾರಿಗೆ ಹಸ್ತಾಂತರಿಸಬೇಕು? ಯಾರಿಗೆ ಕೊಟ್ಟರೆ ಸೂಕ್ತ ಎಂಬ ಗೊಂದಲ್ಲದಲ್ಲಿಯೇ ಮ್ಯಾನೇಜ್ಮೆಂಟ್ ಇರುವುದು ಸದ್ಯ ಫ್ರಾಂಚೈಸಿಯ ಅಭಿಮಾನಿಗಳ ಕಣ್ಣಿಗೆ ಕಾಣಿಸಿದೆ.
ಐಪಿಎಲ್ ಹರಾಜು ಪ್ರಕ್ರಿಯೆಗೂ ಮುನ್ನವೇ ಫಾಪ್ರನ್ನು ರಿಟೇನ್ ಮಾಡಿಕೊಳ್ಳದ ಆರ್ಸಿಬಿ, ಅವರನ್ನು ಖರೀದಿಸಲು ಹಿಂದೇಟು ಹಾಕಿತು. ಅಂದಿನಿಂದ ಇಂದಿನವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿಯೇ ನಾಯಕರಾಗಿ ಫ್ರಾಂಚೈಸಿಯನ್ನು ಮುನ್ನಡೆಸಲಿದ್ದಾರೆ ಎಂದೇ ಫ್ಯಾನ್ಸ್ ಅಭಿಪ್ರಾಯಿಸಿದ್ದಾರೆ. ಆದರೆ, ಈ ಬಗ್ಗೆ ಮಾತ್ರ ಆರ್ಸಿಬಿ ಮ್ಯಾನೇಜ್ಮೆಂಟ್ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಿಲ್ಲ. ಇದು ಫ್ರಾಂಚೈಸಿಯ ಅಭಿಮಾನಿಗಳಲ್ಲಿ ಗೊಂದಲಗಳನ್ನು ಹುಟ್ಟುಹಾಕಿದೆ. ಆದ್ರೆ, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ, ಆರ್ಸಿಬಿ ತಂಡದ ಮಿ.360 ಎಬಿ ಡಿವಿಲಿಯರ್ಸ್ ಸ್ಪಷ್ಟವಾಗಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಇಲ್ಲಿಯವರೆಗೆ ವಿರಾಟ್ ಕೊಹ್ಲಿ ಆರ್ಸಿಬಿಯ ನೂತನ ಕ್ಯಾಪ್ಟನ್ ಎಂಬ ವಿಷಯಕ್ಕೆ ಫ್ರಾಂಚೈಸಿ ಯಾವುದೇ ರೀತಿ ಪ್ರತಿಕ್ರಿಯಿಸದ ಹಿನ್ನೆಲೆ ಅಭಿಮಾನಿಗಳು ವಿರಾಟ್ರನ್ನು ಕ್ಯಾಪ್ಟನ್ ಮಾಡುವುದು ಬಹುತೇಕ ಅನುಮಾನ, ತಂಡದ ಯುವ ಆಟಗಾರರಿಗೆ ನಾಯಕನ ಜವಾಬ್ದಾರಿ ಕೊಟ್ಟು, ವಿರಾಟ್ ತಮ್ಮ ಬ್ಯಾಟಿಂಗ್ ಮೇಲೆ ಗಮನಹರಿಸಲು ಫ್ರಾಂಚೈಸಿ ನಿರ್ದೇಶನ ನೀಡಬಹುದು. ಇದೇ ಕಾರಣಕ್ಕೆ ಅವರ ಹೆಸರನ್ನು ಎಲ್ಲೂ ಹೇಳದೆ ಸುಮ್ಮನಿದೆ ಎಂದು ತಮ್ಮ ತಮ್ಮ ಅನಿಸಿಕೆಗಳನ್ನು ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಎಬಿಡಿ, ಕ್ಯಾಪ್ಟನ್ ವಿಷಯದಲ್ಲಿ ಆರ್ಸಿಬಿಗೆ ಉಳಿದಿರುವುದು ಒಂದೇ ಆಯ್ಕೆ ಅದು ವಿರಾಟ್ ಕೊಹ್ಲಿ ಎಂದಿದ್ದಾರೆ.
"ಕಳೆದ ವರ್ಷಗಳಲ್ಲಿ ಅವರ ಅದ್ಭುತ ಇನ್ನಿಂಗ್ಸ್ಗಳನ್ನು ನಾವೆಲ್ಲಾ ನೋಡಿದ್ದೇವೆ. ವಿರಾಟ್ ಆಟ ನಿಜಕ್ಕೂ ಸ್ಪೂರ್ತಿದಾಯಕ. ತಮ್ಮ ವೃತ್ತಿಯ ಕೊನೆಗೆ ಸನ್ನಿಹಿತದಲ್ಲಿದ್ದಾರೆ. ಆದರೂ ಸಹ ಅವರ ಆಟದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ನಾಯಕನ ಜವಾಬ್ದಾರಿ ಯಾರಿಗೆ ಕೊಡಬೇಕು ಎಂಬ ವಿಷಯದಲ್ಲಿ ಫ್ರಾಂಚೈಸಿಗೆ ಬೇರೆ ಯಾವುದೇ ಆಯ್ಕೆಗಳಿಲ್ಲ. ಅವರ ಮುಂದಿರುವುದು ವಿರಾಟ್ ಕೊಹ್ಲಿ ಮಾತ್ರ" ಎಂದು ಹೇಳಿದ್ದಾರೆ.
ಕೊಹ್ಲಿ ಈ ಮುನ್ನ 2013ರಿಂದ 2021ರವರೆಗೆ ಆರ್ಸಿಬಿ ತಂಡದ ನಾಯಕರಾಗಿದ್ದರು. ಆದರೆ ಬ್ಯಾಟಿಂಗ್ನತ್ತ ಹೆಚ್ಚಿನ ಗಮನಹರಿಸುವ ಸಲುವಾಗಿ 2022ರ ಆವೃತ್ತಿ ಮೊದಲೇ ನಾಯಕತ್ವ ತ್ಯಜಿಸಿದರು. ಕಳೆದ ಟಿ20 ವಿಶ್ವಕಪ್ ಬಳಿಕ ಅವರು ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವುದರಿಂದ ಸದ್ಯ ಹೆಚ್ಚಿನ ಹೊರೆ ಹೊಂದಿಲ್ಲ. ಹೀಗಾಗಿ ತನ್ನ ಪ್ರಮುಖ ಕೊರತೆಯಾಗಿರುವ ಐಪಿಎಲ್ ಟ್ರೋಫಿಯನ್ನು ಈ ಬಾರಿ ನನಸಾಗಿಸಿಕೊಳ್ಳಲು ಅವರು ಮತ್ತೆ ನಾಯಕತ್ವವನ್ನು ಒಪ್ಪಿಕೊಳ್ಳುವ ನಿರೀಕ್ಷೆ ಇದೆ ಎಂಬ ಮಾತುಗಳು ಕೇಳಿಬಂದಿವೆ,(ಏಜೆನ್ಸೀಸ್).