

ಜೈಪುರ: ಇತ್ತೀಚಿನ ದಿನಗಳಲ್ಲಿ ರೀಲ್ಸ್ ಹಾವಳಿ ಮಿತಿಮೀರಿದ್ದು, ಜನರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ನಿಟ್ಟಿನಲ್ಲಿ ಇಲ್ಲದ ಕೆಲಸಕ್ಕೆ ಕೈ ಹಾಕಿ ಪೇಚಿಗೆ ಸಿಲುಕುತ್ತಾರೆ. ಇದೀಗ ರಾಜಸ್ಥಾನದ ಝಾಲಾವರ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ವ್ಯಕ್ತಿಯೊಬ್ಬ ರೀಲ್ಸ್ಗಾಗಿ ಹುಡುಗನೊಬ್ಬನನ್ನು ಕಾರಿನ (Car) ಬಾನೆಟ್ ಮೇಲೆ ಕೂರಿಸಿ ವೇಗವಾಗಿ ಚಲಾಯಿಸುತ್ತಿರುವುದನ್ನು ನೋಡಬಹುದಾಗಿದೆ. ಲೈಕ್ಸ್ ಹಾಗೂ ವೀವ್ಸ್ಗಾಗಿ ಮಗುವಿನ ಜೀವವನ್ನು ಅಪಾಯಕ್ಕೆ ದೂಡಿದ ವ್ಯಕ್ತಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ಕುರಿತು ಮಾತನಾಡಿರುವ ಝಾಲಾವರ್ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು, ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ವಯಂಪ್ರೇರಿತ ದೂರನ್ನು ದಾಖಲಿಸಿಕೊಂಡಿದ್ದು, ಕಾರಿನ ಮಾಲೀಕ ಹಾಗೂ ಚಾಲಕನನ್ನು ಪತ್ತೆಹಚ್ಚುವ ಕೆಲಸ ಮಾಡಲಾಗುತ್ತಿದೆ. ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದ್ದು, ಕ್ರಮ ಜರುಗಿಸಲಾಗುವುದು ಎಂದು ಝಾಲಾವರ್ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.
ಇಂತಹ ವರ್ತನೆ ಇದೇ ಮೊದಲಲ್ಲ. ಸಾಮಾಜಿಕ ಮಾಧ್ಯಮಕ್ಕಾಗಿ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸುವ ವ್ಯಕ್ತಿಗಳ ವಿರುದ್ಧ ಸ್ಥಳೀಯ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್‌ಗಳನ್ನು ಪ್ರದರ್ಶಿಸುವ ಅಪಾಯಗಳು ಮತ್ತು ಅಸುರಕ್ಷಿತ ನಡವಳಿಕೆಯ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸ್ ಅಧಿಕಾರಿಗಳು ಪೋಷಕರು, ಶಿಕ್ಷಣತಜ್ಞರು ಮತ್ತು ಸಮುದಾಯದ ಮುಖಂಡರಿಗೆ ಕರೆ ನೀಡಿದ್ದಾರೆ.