ಗಾಂಧಿನಗರ: ಪ್ರಾಣಿಗಳನ್ನು ನೋಡಲು ಜನರು ಮೃಗಾಲಯಕ್ಕೆ ಹೋಗುತ್ತಾರೆ. ಅದರಲ್ಲೂ ಸಿಂಹ, ಹುಲಿ, ಆನೆಯನ್ನು ನೋಡುವುದೆಂದರೆ ಜನರಿಗೆ ಒಂದು ರೀತಿಯ ಕ್ರೇಜ್. ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇತ್ತೀಚೆಗಷ್ಟೆ ಮೃಗಾಲಯದಲ್ಲಿ ಹುಲಿಯೊಂದು ಮಗುವಿನ ಶರ್ಟ್ ಹಿಡಿದು ಎಳೆಯುತ್ತಿದ್ದದ್ದು, ಚಿಕ್ಕ ವಯಸ್ಸಿನ ಸಿಂಹದ ಮರಿಯನ್ನು ಕಾಪಾಡಿದ್ದ ವ್ಯಕ್ತಿ ಆ ಸಿಂಹ ದೊಡ್ಡದಾದ ಬಳಿಕ ನೋಡಲು ಬಂದಾಗ ಪ್ರೀತಿಯಿಂದ ಸಿಂಹವು ಆ ವ್ಯಕ್ತಿಯನ್ನು ತಬ್ಬಿ ಮುದ್ದಾಡಿ ವಿಡಿಯೋಗಳು ವೈರಲ್(Viral Video) ಆಗಿತ್ತು.
ಪ್ರೀತಿ ತೋರಿಸುವುದರಲ್ಲಿ ಕಾಡುಪ್ರಾಣಿಗಳು ಮನುಷ್ಯರಿಗಿಂತ ಕಡಿಮೆ ಏನು ಇಲ್ಲ. ಸಿಂಹವನ್ನು ಕಾಡಿನ ರಾಜ ಎಂದು ಕರೆಯಲಾಗುತ್ತದೆ. ಅದರ ಗತ್ತು, ಗಾಂಭೀರ್ಯ ಎಂತಹವರನ್ನಾದರೂ ಸೆಳೆಯುತ್ತದೆ. ಆದರೆ ಸಾಕುಪ್ರಾಣಿಯಂತೆ ಮುದ್ದಾಡಲು ಸಾಧ್ಯ ಆಗುವುದಿಲ್ಲ. ಮೃಗಾಲಯದಲ್ಲಿ ಸಿಂಹವನ್ನು ನೋಡಿದರೆ ಏನೋ ಒಂದು ರೀತಿ ಖುಷಿ. ಅಂಥಾದರಲ್ಲಿ ಸಿಂಹವು ರಸ್ತೆಯಲ್ಲಿ ನಿಮ್ಮ ಎದುರಿಗೆ ಬಂದರೆ ಹೇಗಿರುತ್ತದೆ.
ಹೌದು ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಏಷ್ಯಾಟಿಕ್ ಸಿಂಹವೊಂದು ಇದ್ದಕ್ಕಿದ್ದಂತೆ ರಸ್ತೆಗೆ ಬಂದಿದೆ. ಆ ಸಮಯದಲ್ಲಿ ಕೆಲಕ್ಷಣ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿರುವುದನ್ನು ನೋಡಬಹುದು. ಕಾಡಿನ ರಾಜ’ನನ್ನು ನೋಡಿದ ತಕ್ಷಣ, ಎಲ್ಲಾ ಕಾರುಗಳು, ಟ್ರಕ್‌ಗಳು ಮತ್ತು ಬೈಕ್‌ಗಳು ನಿಂತಲ್ಲೇ ನಿಂತಿವೆ. ರಸ್ತೆಯ ಇನ್ನೊಂದು ಬದಿಯಲ್ಲಿ ನಿಲ್ಲಿಸಿದ್ದ ಕಾರಿನಿಂದ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಬಳಿಕ ರಸ್ತೆಯಿಂದ ದೇವಸ್ಥಾನದ ಇಳಿಜಾರಿನ ಕಡೆಗೆ ಸಿಂಹ ಹೋಗುವುದರೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ.
ಈ ವಿಡಿಯೋ ಗುಜರಾತ್ನಿಂದ ಬಂದಿದೆ ಎನ್ನಲಾಗಿದೆ. ಗುಜರಾತ್‌ನ ಭಾವನಗರ-ಸೋಮನಾಥ್ ಹೆದ್ದಾರಿಯಲ್ಲಿ ಎಂದು ಹೇಳಲಾಗುತ್ತಿದೆ. ಅಂದ್ಹಾಗೆ ಗುಜರಾತ್ನಲ್ಲಿ ಆಗಾಗ್ಗೆ ಕಾಡುಪ್ರಾಣಿಗಳು ನಾಡಿನಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ.(ಏಜೆನ್ಸೀಸ್)