ದೇಹ ಮಣ್ಣಾಗುವಷ್ಟರಲ್ಲಿ ಶವ ಪೆಟ್ಟಿಗೆ ಒಳಗಿಂದ ಕೇಳಿ ಬಂತು ಶಬ್ದ; ಅಲ್ಲಿದ್ದವರಿಗೆ ಅಚ್ಚರಿ!

coffin box
Published on

ಅಮೆರಿಕ: ಅಂತ್ಯಕ್ರಿಯೆಯ ಸಂದರ್ಭದಲ್ಲಿ ಅಚಾತುರ್ಯ ಸಂಭವಿಸಿದ್ದು, ಒಂದು ಕ್ಷಣ ಅಲ್ಲಿದ್ದ ಮಂದಿ ಬೆಚ್ಚಿ ಬಿದ್ದಿದ್ದಾರೆ. ಶವ ಪೆಟ್ಟಿಗೆ ಒಳಗಿಂದ ಶಬ್ದ ಕೇಳಿ ಬರಲಾರಂಭಿಸಿದೆ! ಈ ಘಟನೆ ನಡೆದಿರುವುದು ದಕ್ಷಿಣ ಅಮೆರಿಕದ ಈಕ್ವೆಡರ್​ನಲ್ಲಿ.

76 ವರ್ಷದ ಬೆಲ್ಲಾ ಮೊಂಟೊಯಾ ಎಂಬಾಕೆ ಮೃತಪಟ್ಟಿದ್ದಾರೆ ಎಂದು ನಿರ್ಧರಿಸಿ, ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಇನ್ನೇನು ದೇಹ ಮಣ್ಣಾಗಬೇಕು ಎನ್ನುವಷ್ಟರಲ್ಲಿ ಶವ ಪೆಟ್ಟಿಗೆ ಒಳಗಿನಿಂದ ಸದ್ದು ಕೇಳಿ ಬರಲಾರಂಭಿಸಿದೆ. ಈ ವೇಳೆ ಅಲ್ಲಿದ್ದವರಿಗೆ ಅಚ್ಚರಿ!

ಅಂತ್ಯಸಂಸ್ಕಾರದ ವಿಧಿವಿಧಾನ ನಡೆಯುತ್ತಿದ್ದ ಸಂದರ್ಭದಲ್ಲಿ ಎಚ್ಚರಗೊಂಡ ಬೆಲ್ಲಾ ಮೊಂಟೊಯಾ ಶವ ಪೆಟ್ಟಿಗೆ ತಟ್ಟಿದ್ದಾರೆ. ಕೂಡಲೇ ಅಲ್ಲಿದ್ದವರು ಮುಚ್ಚಳ ತೆರೆದು ನೋಡಿದ್ದಾರೆ. ಈ ವೇಳೆ ಮೃತಪಟ್ಟಿದ್ದಾರೆ ಎಂದು ಭಾವಿಸಿದ್ದ ಮಹಿಳೆ ಉಸಿರಾಡುತ್ತಿದ್ದರು.

ಬೆಲ್ಲಾ ಮೊಂಟೊಯಾ ಮೃತಪಟ್ಟಿದ್ದಾರೆ ಎಂದು ಘೋಷಿಸಿದ ಐದು ಗಂಟೆಯೊಳಗೆ ಪ್ರಜ್ಞೆ ಬಂದಿದೆ. ಆಕೆ ಕ್ಯಾಟಲೆಪ್ಸಿ ಎಂಬ ರೋಗದಿಂದ ಬಳಲುತ್ತಿದ್ದರು. ಈ ಸಂದರ್ಭದಲ್ಲಿ ವ್ಯಕ್ತಿಯು ಪ್ರಜ್ಞೆ ಕಳೆದುಕೊಳ್ಳುತ್ತಾರೆ ಮತ್ತು ದೇಹ ಬಿಗಿಗೊಳ್ಳುತ್ತದೆ. ಹೀಗಾಗಿ ಈ ಅಚಾತುರ್ಯ ಸಂಭವಿಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net