

ಮಧ್ಯಪ್ರದೇಶ: ಬ್ಯಾಂಕ್ ಖಾತೆಯಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿರುವ ಬಗ್ಗೆ ಮಾಹಿತಿ ಪಡೆದುಕೊಂಡ ದೆಹಲಿ ಪೊಲೀಸರು, ನೋಟೀಸ್ ನೀಡುತ್ತಿದ್ದಂತೆ ಕೂಲಿ ಕೆಲಸ ಮಾಡುತ್ತಿದ್ದ ನಾಲ್ವರು ಯುವಕರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ತಮ್ಮ ಖಾತೆಯಲ್ಲಿ ಇಷ್ಟೊಂದು ಮೊತ್ತದ ವ್ಯವಹಾರ ನಡೆಯಲು ಹೇಗೆ ಸಾಧ್ಯ ಎಂದು ಬ್ಯಾಂಕ್ ಸ್ಟೇಟ್ಮೆಂಟ್ ಪಡೆದು ಪರಿಶೀಲಿಸಿದ್ದಾರೆ.
ಎಚ್‌ಡಿಎಫ್‌ಸಿ ಬ್ಯಾಂಕ್ ನೌಕರ ಪ್ರಿಯಾಂಶ್ ಬಂಜಾರಿ ಎಂಬಾತನಿಗೆ ಹೊಸ ಬ್ಯಾಂಕ್ ಖಾತೆ ತೆರೆಯುವ ಗುರಿ ನೀಡಲಾಗಿತ್ತು. ಇದಕ್ಕಾಗಿ ತನ್ನ ಗ್ರಾಮದ ಕೆಲ ಯುವಕರ ದಾಖಲೆ ಸಂಗ್ರಹಿಸಿ, ಜೀರೋ ಬ್ಯಾಲೆನ್ಸ್‌ನಲ್ಲಿ ಖಾತೆ ತೆರೆದಿದ್ದಾನೆ. ಕೂಲಿ ಕಾರ್ಮಿಕರಾಗಿದ್ದ ಸ್ನೇಹಿತರು, ಈತನ ಮಾತಿಗೆ ಮರುಳಾಗಿದ್ದಾರೆ. ಹೀಗಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡಿದ್ದರು. ಬಳಿಕ ಕೂಲಿ ಕೆಲಸ ಆರಿಸಿ ಹೊರರಾಜ್ಯಕ್ಕೆ ತೆರಳಿದ್ದಾರೆ. ಆದರೆ ತಮ್ಮ ಹೆಸರಿನಲ್ಲಿ ಖಾತೆ ತೆರೆಯಲಾಗಿದೆಯೇ? ಇಲ್ಲವೇ ಎಂಬ ಬಗ್ಗೆ ಯಾವುದೇ ಪಡೆದುಕೊಂಡಿರಲಿಲ್ಲ.
ನಾಲ್ವರು ಯುವಕರ ಖಾತೆಯಲ್ಲಿ ಸುಮಾರು 77 ಕೋಟಿ ರೂ. ವಹಿವಾಟು ನಡೆದಿರುವುದನ್ನು ಕಂಡು ಐಟಿ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆ. ಈ ಬಗ್ಗೆ ದೆಹಲಿ ಪೊಲೀಸರು ವಹಿವಾಟಿನ ಬಗ್ಗೆ ಉತ್ತರಿಸುವಂತೆ ಯುವಕರಿಗೆ ನೋಟಿಸ್ ಕಳುಹಿಸಿದ್ದು, ಕೋಟ್ಯಾಂತರ ರೂಪಾಯಿ ವ್ಯವಹಾರದ ಬಗ್ಗೆ ದಾಖಲೆ ಒದಗಿಸಿ, ಸ್ಪಷ್ಟನೆ ನೀಡುವಂತೆ ಹೇಳಿದ್ದಾರೆ.
ಈ ಬಗ್ಗೆ ಸಂತ್ರಸ್ತ ಯುವಕರು ನ್ಯಾಯ ಒದಗಿಸಿಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ತಮ್ಮ ಖಾತೆಯಲ್ಲಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಬ್ಯಾಂಕ್ ಕೂಡ ತನಿಖೆ ನಡೆಸುವುದಾಗಿ ಭರವಸೆ ನೀಡಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಹಿತಿ ಪಡೆದುಕೊಂಡು ಯುವಕರ ಖಾತೆಯಿಂದ ನಡೆದಿದೆ ಎನ್ನಲಾದ ಕೋಟ್ಯಾಂತರ ರೂಪಾಯಿ ಹಣ ವ್ಯವಹಾರದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಇನ್ನಷ್ಟು ಯುವಕರು ಈ ರೀತಿಯ ವಂಚನೆಗೆ ಒಳಗಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಸದ್ಯ ಪೊಲೀಸರ ತನಿಖೆಯಿಂದ ಹೇಗೆ ಇಷ್ಟೊಂದು ಮೊತ್ತದ ಹಣ ವಹಿವಾಟು ನಡೆಯಿತು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. (ಏಜೆನ್ಸೀಸ್)