ನನ್ನ ತಾಯಿಗೆ ನನ್ನ ಅಜ್ಜಿ-ತಾತ ಅಂದ್ರೆ ಇಷ್ಟವಿಲ್ಲ... ವಿದ್ಯಾರ್ಥಿಯ ಉತ್ತರ ಪತ್ರಿಕೆ ಕಂಡು ಟೀಚರ್​ ಶಾಕ್​! Exam Paper

Exam Paper
Published on

Exam Paper : ಪರೀಕ್ಷೆಯ ಸಮಯದಲ್ಲಿ ಕೆಲವೊಮ್ಮೆ ಮಕ್ಕಳು ತಮಗನಿಸಿದ್ದನ್ನು ಬರೆಯುತ್ತಾರೆ. ಉತ್ತರ ಗೊತ್ತಿಲ್ಲದಿದ್ದಾಗ ಪೇಜ್​ ತುಂಬಿಸಲು ಯಾವುದೋ ಕತೆ-ಕವನ ಬರೆಯುವುದನ್ನು ನೋಡಿದ್ದೇವೆ. ಇನ್ನು ಕೆಲವರು ಪಾಸ್​ ಮಾಡುವಂತೆ ಶಿಕ್ಷಕರ ಬಳಿ ಬೇಡಿಕೊಳ್ಳುತ್ತಾರೆ. ಉತ್ತರ ಪತ್ರಿಕೆಯಲ್ಲಿ ತರಹೇವಾರಿ ಕತೆಗಳನ್ನು ಬರೆದಿರುತ್ತಾರೆ. ಆದರೆ, ಕೆಲವೊಮ್ಮೆ ಅವರ ಉತ್ತರಗಳು ಜನರನ್ನು ನಗಿಸುವುದಲ್ಲದೆ, ಸಮಾಜವನ್ನು ಯೋಚಿಸುವಂತೆಯೂ ಮಾಡುತ್ತದೆ. ಅಂತಹ ಒಂದು ಘಟನೆ ತೆಲಂಗಾಣದ ಚಂದೂರ್ತಿ ಮಂಡಲದ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಇತ್ತೀಚೆಗೆ ನಡೆದ ಇಂಗ್ಲಿಷ್ ಪರೀಕ್ಷೆಯಲ್ಲಿ, ನಾಲ್ಕನೇ ತರಗತಿಯ ವಿದ್ಯಾರ್ಥಿಗೆ ನಿಮ್ಮ ತಾಯಿಯ ಇಷ್ಟ ಮತ್ತು ಇಷ್ಟಪಡದಿರುವ ವಿಷಯಗಳ ಬಗ್ಗೆ ಕೇಳಲಾಯಿತು. ಈ ವೇಳೆ ವಿದ್ಯಾರ್ಥಿ ನನ್ನ ತಾಯಿಗೆ ನನ್ನ ಅಜ್ಜಿ ಮತ್ತು ತಾತ ಅಂದ್ರೆ ಇಷ್ಟವಿಲ್ಲ ಅಂತ ಸ್ಪಷ್ಟವಾಗಿ ಬರೆದಿದ್ದಾನೆ. ಇದಕ್ಕೆ ಸಂಬಂಧಿಸಿದ ಉತ್ತರ ಪತ್ರಿಕೆಯ ಸ್ಕ್ರೀನ್​ಶಾಟ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.​

ವಿದ್ಯಾರ್ಥಿ ಬರೆದ ಉತ್ತರವನ್ನು ನೋಡಿ ಶಿಕ್ಷಕರೇ ಒಂದು ಕ್ಷಣ ಆಘಾತಕ್ಕೆ ಒಳಗಾಗಿದ್ದಾರೆ. ಮೊದಲಿಗೆ, ವಿದ್ಯಾರ್ಥಿ ಆ ರೀತಿ ಬರೆದು ಏನು ಹೇಳಲು ಹೊರಟಿದ್ದಾನೆ ಎಂದು ಆಶ್ಚರ್ಯಪಟ್ಟರು. ಆದರೆ, ಈ ಉತ್ತರವು ಮಗುವಿನ ಮುಗ್ಧತೆಯನ್ನು ಮಾತ್ರವಲ್ಲದೆ, ಕುಟುಂಬ ಬಂಧದ ಆಳವಾದ ಪ್ರತಿಬಿಂಬವನ್ನೂ ಪ್ರತಿಬಿಂಬಿಸುತ್ತದೆ ಎಂದು ಶಿಕ್ಷಕರು ಅರಿತುಕೊಂಡರು.

ಪರೀಕ್ಷಾ ಪತ್ರಿಕೆಯಲ್ಲಿ ಈ ಉತ್ತರವನ್ನು ನೋಡಿದ ಶಿಕ್ಷಕರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೆ, ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗಿದೆ. ಕೆಲವರು ನಗುವಿನ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದರೆ, ಇತರರು ಇದರ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ ಎಂದು ಕಾಮೆಂಟ್​ ಮಾಡಿದ್ದಾರೆ.

ಇಲ್ಲಿ ಚರ್ಚಿಸಬೇಕಾದ ಮುಖ್ಯ ವಿಷಯವೆಂದರೆ ಮಕ್ಕಳು ಮನೆಯಲ್ಲಿ ಕೇಳುವ ಮತ್ತು ನೋಡುವ ವಿಷಯಗಳನ್ನು ಹೇಗೆ ಗ್ರಹಿಸುತ್ತಾರೆ ಎಂಬುದು. ಈ ಘಟನೆಯು ಪೋಷಕರು ಮತ್ತು ಅತ್ತೆ-ಮಾವನ ನಡುವಿನ ಮಾತು ಮತ್ತು ಅಭಿಪ್ರಾಯಗಳಲ್ಲಿನ ವ್ಯತ್ಯಾಸಗಳು ಮಕ್ಕಳ ಮನಸ್ಸಿನಲ್ಲಿ ಹೇಗೆ ಬೇರೂರುತ್ತವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಮಕ್ಕಳು ಅಂತಹ ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಪರೀಕ್ಷೆಯಂತಹ ಸಂದರ್ಭಗಳಲ್ಲಿಯೂ ಮುಕ್ತವಾಗಿ ವ್ಯಕ್ತಪಡಿಸಿದ್ದಾರೆ.

ಈ ಘಟನೆಯು ಚಿಕ್ಕದಾಗಿದ್ದರೂ, ಸಮಾಜದಲ್ಲಿನ ಕುಟುಂಬ ಸಂಬಂಧಗಳಲ್ಲಿನ ಬದಲಾವಣೆಗಳಿಗೆ ಗಮನ ಕೊಡುವ ಅಗತ್ಯವನ್ನು ನಮಗೆ ನೆನಪಿಸುತ್ತದೆ. ಕೆಲವು ನೆಟ್ಟಿಗರು, ಇದು ನಗೆಪಾಟಲಿನ ಪ್ರತಿಕ್ರಿಯೆಯಾಗಿರಬಹುದು, ಆದರೆ ಇದು ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ಅಂತರಕ್ಕೆ ಉದಾಹರಣೆಯಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ರೀತಿಯ ಘಟನೆಗಳು ನಾವು ಮಕ್ಕಳನ್ನು ಹೇಗೆ ನಡೆಸಿಕೊಳ್ಳುತ್ತೇವೆ ಮತ್ತು ಅವರು ನಮ್ಮ ಮಾತುಗಳನ್ನು ಎಷ್ಟರ ಮಟ್ಟಿಗೆ ಗಣನೆಗೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ಬಹಿರಂಗಪಡಿಸುತ್ತವೆ. ಮಕ್ಕಳ ಬೆಳವಣಿಗೆಯಲ್ಲಿ ಕುಟುಂಬ ವಾತಾವರಣ ಎಷ್ಟು ಮುಖ್ಯ ಎಂಬುದನ್ನು ಇದು ಮತ್ತೊಮ್ಮೆ ಸಾಬೀತುಪಡಿಸುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net