

ಪುಣೆ : ಭಾರತದಲ್ಲಿ ಕ್ರೀಡಾಪಟುಗಳಿಗೆ ಸಾಕಷ್ಟು ಸೌಲಭ್ಯಗಳಿಲ್ಲದಿದ್ದರೂ ಸಾಧನೆಯ ಪಥ ಹಿಡಿದು ಶ್ರಮಿಸುತ್ತಿದ್ದಾರೆ. ಅಂತಹುದರಲ್ಲಿ ಇರುವ ಮೂಲಸೌಕರ್ಯಗಳ ಬಗ್ಗೆಯೂ ಉಡಾಫೆ ಮನೋಭಾವ ತೋರುವುದು ಎಷ್ಟು ಸಮಂಜಸ? ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ರಾಜಕೀಯ ನಾಯಕರು ಈ ರೀತಿಯ ದುರ್ವರ್ತನೆ ತೋರಿ ಸುದ್ದಿ ಮಾಡಿದ್ದಾರೆ.
ಜೂನ್ 26 ರಂದು ಪುಣೆಯ ಶಿವ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಲು ಹೋದ ಗಣ್ಯರು, ಕ್ರೀಡಾಂಗಣದ ಒಳಗಡೆ ಅಥ್ಲೀಟ್ಗಳು ಓಟದ ಅಭ್ಯಾಸ ಮಾಡಲು ಬಳಸುವ ವಿಶೇಷ ಟ್ರ್ಯಾಕ್ನ ಮೇಲೆ ತಮ್ಮ ಕಾರುಗಳನ್ನು ಪಾರ್ಕ್ ಮಾಡಿಸಿದ್ದಾರೆ! ಎನ್ಸಿಪಿ ಮುಖ್ಯಸ್ಥ ಹಾಗೂ ಇಂಡಿಯನ್ ಒಲಂಪಿಕ್ ಅಸೋಸಿಯೇಷನ್ನಿನ ಅಧ್ಯಕ್ಷರಾಗಿರುವ ಶರದ್ ಪವಾರ್, ಮಹಾರಾಷ್ಟ್ರ ಕ್ರೀಡಾ ಸಚಿವ ಸುನಿಲ್ ಕೇದಾರ್ ಮತ್ತು ಮತ್ತೊಬ್ಬ ಸಚಿವೆ ಅದಿತಿ ತತ್ಕರೆ ಮುಂತಾದವರ ವಾಹನಗಳು ಟ್ರ್ಯಾಕ್ನ ಮೇಲೆ ಕಂಡುಬಂದವು ಎನ್ನಲಾಗಿದೆ.
ಪುಣೆಯ ಶಿವಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಸಿದ್ಧಾರ್ಥ್ ಶಿರೋಲೆ ಈ ಬಗ್ಗೆ ತಿಳಿಸುತ್ತಾ, ಅಥ್ಲೆಟಿಕ್ ಸಮುದಾಯಕ್ಕೆ ಅಗೌರವ ತೋರಿಸುವ ವಿಐಪಿ ಸಂಸ್ಕೃತಿ ಮತ್ತು ಉದ್ಧಟತನ ಇದು ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಅವರು ಕ್ರೀಡೆಗಳ ಬಗ್ಗೆ ಈ ರೀತಿಯ ಅಗೌರವ ನೋಡಲು ವಿಷಾದವೆನಿಸುತ್ತದೆ. ನಮ್ಮ ದೇಶದಲ್ಲಿ ಸಾಕಷ್ಟು ಕ್ರೀಡಾ ಸೌಲಭ್ಯಗಳು ಇಲ್ಲದಿರುವಾಗ, ಎಲ್ಲಾ ಕ್ರೀಡಾ ಕೇಂದ್ರಗಳಿಗೂ ಸೂಕ್ತ ಉಪಚಾರದ ಅವಶ್ಯಕತೆ ಇದೆ ಎಂದಿದ್ದಾರೆ. (ಏಜೆನ್ಸೀಸ್)