

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆ ವೆಬ್ಸೈಟ್ ಹೊಸ ರೂಪ ಪಡೆದುಕೊಂಡಿದೆ. ಅಪೂರ್ಣ ಮಾಹಿತಿ ಒಳಗೊಂಡ ಹಳೆಯ ಕೆಎಸ್ಪಿ ವೆಬ್ಸೈಟ್ಗೆ ಅಂತ್ಯ ಹಾಡಿರುವ ಪೊಲೀಸ್ ಇಲಾಖೆ, ಇ-ಆಡಳಿತ ಸಹಾಯದಿಂದ ಹೊಸ ಸ್ವರೂಪ ಇರುವ ವೆಬ್ಸೈಟನ್ನು ಪರಿಚಯಗೊಳಿಸಿದೆ.
ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಹೊರಬಂದಿರುವ ವೆಬ್ಸೈಟ್ ಜನಸಾಮಾನ್ಯರಿಗೂ ಸರಳವಾಗಿ ಮಾಹಿತಿ ಲಭಿಸುವಂತಿದೆ. ಪೊಲೀಸ್ ಇಲಾಖೆ ಇತಿಹಾಸ, ಆಡಳಿತ ವರ್ಗ, ಅಪರಾಧ ಅಂಕಿಅಂಶ, ಸಂಚಾರ ವಿಭಾಗ, ಪೊಲೀಸ್ ತರಬೇತಿ, ಮಹಿಳೆಯರು ಮತ್ತು ಮಕ್ಕಳ ರಕ್ಷಣೆ - ಈ ಎಲ್ಲ ಅಂಶಗಳನ್ನು ವಿವರವಾಗಿ ನೀಡಲಾಗಿದೆ.
ಅಪರಾಧಗಳನ್ನು ಸಂಬಂಧಿಸಿದ ಕಾಯ್ದೆ, ಶಿಕ್ಷೆ, ಅಪರಾಧ ತಡೆಯಲ್ಲಿ ಸಾರ್ವಜನಿಕರ ಪಾತ್ರದ ಬಗ್ಗೆ ವಿವರಿಸಲಾಗಿದೆ. ಐಪಿಎಸ್ ಅಧಿಕಾರಿಗಳಿಂದ ಪೊಲೀಸ್ ಠಾಣೆಗಳವರೆಗೂ ದೂರವಾಣಿ, ಮೊಬೈಲ್ ಸಂಖ್ಯೆ ಮತ್ತು ವಿದೇಶಿ ಪ್ರಜೆಗಳ ನೋಂದಣಿ ಮಾಹಿತಿಯೂ ಒಳಗೊಂಡಿದೆ. ಸುಳ್ಳು ಸುದ್ದಿ ಅಸಲಿಯತ್ತು ಕೂಡ ತಿಳಿಯಬಹುದು.
ನಾಗರೀಕ ಸೇವಾ ತಾಣದಲ್ಲಿ ನೇಮಕಾತಿ, ಎಸ್ಐಆರ್, ಕೆಎಸ್ಪಿ, ಇ-ಲಾಸ್ಟ್ ರಿಪೋರ್ಟ್, ಮಾಹಿತಿ ಹಕ್ಕು, ನಾಗರೀಕ ಕೇಂದ್ರಿತ ತಾಣ, ಟೆಂಡರ್ ಇ-ಸಂಗ್ರಹಣೆ(ಜಿಇಎಂ) ವೆಬ್ಸೈಟ್ ಲಿಂಕ್ಗಳು ಇದರಲ್ಲಿ ಲಭಿಸಲಿದೆ. ಜೊತೆಗೆ ರಾಜ್ಯ ಸರ್ಕಾರದ ಇತರ ಇಲಾಖೆಗಳ ಮಾಹಿತಿ ಮತ್ತು ಸೇವೆಯನ್ನು ಒದಗಿಸುವ ವೆಬ್ಸೈಟ್ಗಳ ಲಿಂಕ್ಗಳು, ಆಯೋಗಗಳು-ನ್ಯಾಯಾಲಯಗಳ ಮಾಹಿತಿಯೂ ಹೊಸ ಕೆಎಸ್ಪಿ ವೆಬ್ಸೈಟ್ನಲ್ಲಿ ಸಿಗಲಿದೆ. ಇದು ವೆಬ್ಸೈಟ್ ವಿಳಾಸ - https://ksp.karnataka.gov.in/