ನೆರಳಿನೊಂದಿಗೆ ಬರುತ್ತಿದ್ದಾರೆ ವಿನೋದ್​ ಪ್ರಭಾಕರ್​ ...

Shadow - Final
Published on

ಬೆಂಗಳೂರು: ವಿನೋದ್​ ಪ್ರಭಾಕರ್​ ಅಭಿನಯದ 'ಶ್ಯಾಡೋ' ಚಿತ್ರವು 2020ರ ಫೆಬ್ರವರಿಯಲ್ಲೇ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ಚಿತ್ರಗಳ ಬಿಡುಗಡೆಗೆ ದೊಡ್ಡ ಪೈಪೋಟಿ ಇದ್ದುದರಿಂದ ಬಿಡುಗಡೆ ಮಾರ್ಚ್​ಗೆ ಹೋಯಿತು. ಮಾರ್ಚ್​ನಲ್ಲಿ ಲಾಕ್​ಡೌನ್​ ಶುರುವಾಗಿ, ಇದೀಗ ಇದೇ ಫೆಬ್ರವರಿ 5ರಂದು 'ಶ್ಯಾಡೋ' ಬಿಡುಗಡೆಯಾಗುತ್ತಿದೆ.

ಈ ಕುರಿತು ಮಾತನಾಡಿರುವ ವಿನೋದ್​, ‘ಕೊನೆಯ ಕ್ಷಣದಲ್ಲಿ ಬಿಡುಗಡೆ ಮಾಡುವ ನಿರ್ಧಾರವಾಯ್ತು. ಎಲ್ಲೋ ಒಂದು ಕಡೆ ಭಯ ಇದೆ. ಆದರೂ ಒಳ್ಳೇ ಕಥೆಯೊಂದಿಗೆ ಈ ಬಾರಿ ಚಿತ್ರಮಂದಿರಕ್ಕೆ ಬರುತ್ತಿದ್ದೇನೆ. ಇಲ್ಲಿಯವರೆಗೂ ನನ್ನ ಸಿನಿಮಾಗಳಲ್ಲಿ ಮಾಸ್ ಅಂಶಗಳೇ ಹೆಚ್ಚಿರುತ್ತಿತ್ತು. ಆದ್ರೆ, 'ಶ್ಯಾಡೋ' ಸಿನಿಮಾ ಮಾತ್ರ ಕ್ಲಾಸ್ ಆಡಿಯನ್ಸ್‌ಗೂ ಇಷ್ಟವಾಗಲಿದೆ. ಅಂದುಕೊಂಡಿದ್ದಕ್ಕಿಂತ ಅಚ್ಚುಕಟ್ಟಾಗಿ ಸಿನಿಮಾ ಮೂಡಿಬಂದಿದೆ' ಎನ್ನುತ್ತಾರೆ.

ಈ ಚಿತ್ರದಲ್ಲೂ ಬೇರ್ ಬಾಡಿ ಫೈಟ್ ಸೀನ್ ಕಾಣಬಹುದು ಎನ್ನುವ ಅವರು, 'ಇಡೀ ಸಿನಿಮಾದಲ್ಲಿ ಎರಡೇ ಹಾಡಿದ್ದರೂ, ಒಂದೊಳ್ಳೆಯ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಇದು. ಇಷ್ಟು ದಿನ ಜನ, ನನ್ನನ್ನು ಸಿಂಗಲ್ ಸ್ಟ್ರೀನ್​ಗಳಲ್ಲೇ ಹೆಚ್ಚು ನೋಡಿದ್ದರು. ಈ ಬಾರಿ ಮಾಲ್‌ನಲ್ಲಿಯೂ ಈ ಸಿನಿಮಾಕ್ಕೆ ಒಳ್ಳೇಯ ಪ್ರತಿಕ್ರಿಯೆ ಸಿಗಲಿದೆ ಎಂಬ ಭರವಸೆ ಇದೆ. ನಮ್ಮ ಚಿತ್ರವನ್ನು ಧೀರಜ್ ಎಂಟರ್‌ಪ್ರೈಸಿಸ್ ನವರು ವಿತರಣೆಯ ಹಕ್ಕನ್ನು ಪಡೆದುಕೊಂಡಿದ್ದಾರೆ' ಎಂದರು ವಿನೋದ್.

ಈ ಚಿತ್ರದಲ್ಲಿ ವಿನೋದ್‌ಗೆ ಜೋಡಿಯಾಗಿ ಶೋಭಿತಾ ರಾಣಾ ನಟಿಸಿದ್ದಾರೆ. ಶರತ್ ಲೋಹಿತಾಶ್ವ, ಶ್ರವಣ್, ಸತ್ಯದೇವ್ ಸೇರಿ ಹಲವರು ಈ ಸಿನಿಮಾದಲ್ಲಿದ್ದಾರೆ. ಕತೆ, ಚಿತ್ರಕತೆ ಮತ್ತು ಸಂಭಾಷಣೆಯನ್ನು ನಿರ್ದೇಶಕ ರವಿ ಬರೆದಿದ್ದಾರೆ. ಅಚ್ಚು ಅವರ ಸಂಗೀತ, ಮನೋಹರ್ ಜೋಷಿ ಛಾಯಾಗ್ರಹಣ ಈ ಚಿತ್ರಕ್ಕಿದ್ದು, ಶ್ರೀಕನಕ ದುರ್ಗಾ ಚಲನಚಿತ್ರ ಬ್ಯಾನರ್​ನಡಿ ಚಕ್ರವರ್ತಿ ನಿರ್ಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net