ವಿನೋದ್​ ಕಾಂಬ್ಳಿ ಆರೋಗ್ಯ ಕಾಳಜಿಗೆ ಮುಂದಾದ 83ರ ವಿಶ್ವ ವಿಜೇತರು

web 83 kambli
Published on

ಮುಂಬೈ: ಪ್ರತಿಭಾನ್ವಿತ ಕ್ರಿಕೆಟಿಗನಾಗಿದ್ದರೂ ದುಶ್ಚಟಗಳಿಂದಾಗಿ ವೃತ್ತೀಜಿವನದಲ್ಲಿ ನಿರೀತ ಸಾಧನೆ ತೋರಿಸದೆ ಆರ್ಥಿಕ ಮುಗ್ಗಟ್ಟಿಗೂ ಸಿಲುಕಿದ್ದ ವಿನೋದ್​ ಕಾಂಬ್ಳಿ ಈಗ ತೀವ್ರ ಆರೋಗ್ಯ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಸೂಕ್ತ ಚಿಕಿತ್ಸೆಯನ್ನು ಒದಗಿಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮಾಡಲು 1983ರ ವಿಶ್ವಕಪ್​ ವಿಜೇತ ಭಾರತ ತಂಡದ ಸದಸ್ಯರು ಮುಂದಾಗಿದ್ದಾರೆ.

"ಕಾಂಬ್ಳಿ ನನಗೆ ಮಗನಿದ್ದಂತೆ. ಅವರ ಆರೈಕೆಗೆ ನಾವು ಸಿದ್ಧರಿದ್ದೇವೆ. ಇದೇ ರೀತಿ ಸಂಕಷ್ಟದಲ್ಲಿರುವ ಇತರ ಕ್ರಿಕೆಟಿಗರಿಗೂ ಸಹಾಯ ಮಾಡುವ ಯೋಜನೆ ಇದೆ' ಎಂದು 83ರ ತಂಡದ ಸದಸ್ಯ ಸುನೀಲ್​ ಗಾವಸ್ಕರ್​ ಹೇಳಿದ್ದಾರೆ. 83ರ ತಂಡದ ನಾಯಕ ಕಪಿಲ್​ ದೇವ್​ ಕೂಡ 52 ವರ್ಷದ ಕಾಂಬ್ಳಿ ಸಹಾಯಕ್ಕೆ ಸಿದ್ಧರಿದ್ದೇವೆ. ಆದರೆ ಕಾಂಬ್ಳಿ ಮದ್ಯವ್ಯಸನದಿಂದ ಹೊರಬರಲು ಮೊದಲಿಗೆ ತಾವೇ ಸ್ವತ@ ಮುಂದೆ ಬರಬೇಕೆಂಬ ಷರತ್ತು ಹಾಕಿದ್ದಾರೆ. ಕುಡಿತದ ಚಟದಿಂದ ಹೊರಬರಲು ಕಾಂಬ್ಳಿ ಇದುವರೆಗೆ 14 ಬಾರಿ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ್ದರೂ ಪ್ರಯೋಜನವಾಗಿಲ್ಲ.

ಇತ್ತೀಚೆಗೆ ಕೋಚ್​ ರಮಾಕಾಂತ್​ ಆಚ್ರೇಕರ್​ ಗೌರವಾರ್ಥ ಸಮಾರಂಭದಲ್ಲಿ ಬಾಲ್ಯದ ಗೆಳೆಯ ಸಚಿನ್​ ತೆಂಡುಲ್ಕರ್​ ಜತೆ ಕಾಂಬ್ಳಿ ಭಾಗವಹಿಸಿದಾಗ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿರುವುದು ಸ್ಪಷ್ಟವಾಗಿ ಕಂಡುಬಂದಿತ್ತು.

ಕಳೆದ ಕೆಲವರ್ಷಗಳಿಂದ ಕಾಂಬ್ಳಿ ಭಾರಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಬಿಸಿಸಿಐನಿಂದ ಮಾಜಿ ಕ್ರಿಕೆಟಿಗರ ನಿವೃತ್ತಿವೇತನವಾಗಿ ಮಾಸಿಕ 30 ಸಾವಿರ ರೂ. ಪಡೆಯುವ ಕಾಂಬ್ಳಿ, ಮುಂಬೈನಲ್ಲಿ 8 ಕೋಟಿ ರೂ. ಮೌಲ್ಯದ ಮನೆ ಹೊಂದಿದ್ದಾರೆ. ಆದರೆ ಅದರ ಬ್ಯಾಂಕ್​ ಸಾಲ ಮತ್ತು ನಿರ್ವಹಣಾ ವೆಚ್ಚವನ್ನು ಸರಿಯಾಗಿ ಪಾವತಿಸದ ಕಾರಣ ಅದರ ಮಾರಾಟ ದುಸ್ತರವೆನಿಸಿದೆ. ಸದ್ಯ ನಿರುದ್ಯೋಗಿಯಾಗಿರುವ ಕಾಂಬ್ಳಿ, ತನ್ನ ಮದ್ಯವ್ಯಸನದಿಂದಾಗಿ ಸಿಕ್ಕ ಕೆಲಸಗಳನ್ನೂ ಕಳೆದುಕೊಳ್ಳುತ್ತಿದ್ದಾರೆ. ಕಾಂಬ್ಳಿ ದುಶ್ಚಟಗಳಿಂದಾಗಿ ಬಾಲ್ಯದ ಗೆಳೆಯ ಸಚಿನ್​ ಕೂಡ ಅಂತರ ಕಾಯ್ದುಕೊಂಡು ಬರುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net