

ಮುಂಬೈ: ಡಿ. 22ರಂದು ರಾಜಸ್ಥಾನದ ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮತ್ತು ಉದ್ಯಮಿ ವೆಂಕಟ ದತ್ತ ಸಾಯಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ರನ್ನು ಅವರ ಮುಂಬೈ ನಿವಾಸದಲ್ಲಿ ಭೇಟಿಯಾಗಿ ವಿವಾಹಕ್ಕೆ ಆಹ್ವಾನಿಸಿದರು. ನಂತರ ಸಚಿನ್ ಸಾಮಾಜಿಕ ಜಾಲತಾಣದಲ್ಲಿ ಸಿಂಧು ವಿವಾಹಕ್ಕೆ ವಿಶೇಷವಾದ ರೀತಿಯಲ್ಲಿ ಶುಭಹಾರೈಸಿದರು.
"ಬ್ಯಾಡ್ಮಿಂಟನ್ ಆಟದಲ್ಲಿ ಸ್ಕೋರ್ಗಳು ಯಾವಾಗಲೂ "ಲವ್'ನಿಂದ ಶುರುವಾಗುತ್ತವೆ. ವೆಂಕಟ ದತ್ತ ಸಾಯಿ ಜತೆಗಿನ ನಿಮ್ಮ ಪ್ರಯಾಣವೂ ಎಂದೆಂದಿಗೂ "ಲವ್' (ಪ್ರೀತಿ) ಜತೆ ಮುಂದುವರಿಯಲಿ. ಪಿವಿ ಸಿಂಧು ನಿಮ್ಮ ಜೀವನದ ಅತಿದೊಡ್ಡ ದಿನಕ್ಕೆ ನನ್ನನ್ನು ವೈಯಕ್ತಿಕವಾಗಿ ಬಂದು ಆಹ್ವಾನಿಸಿರುವುದಕ್ಕೆ ಧನ್ಯವಾದಗಳು. ನಿಮ್ಮಿಬ್ಬರ ಜೀವನದಲ್ಲೂ ನೆನಪುಗಳ ಸ್ಮ್ಯಾಷ್ ಮತ್ತು ಸಂತಸಗಳ ರ್ಯಾಲಿ ನಿರಂತರವಾಗಿರಲಿ' ಎಂದು ಸಚಿನ್ ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ಹಾರೈಸಿದ್ದಾರೆ.
ಪ್ರಸಕ್ತ ಪೊಸಿಸೆಕ್ಸ್ ಟೆಕ್ನಾಲಜಿಯಲ್ಲಿ ಕಾರ್ಯಕಾರಿ ನಿರ್ದೇಶಕರಾಗಿರುವ ವೆಂಕಟ ದತ್ತ ಸಾಯಿ ಈ ಮುನ್ನ ಐಪಿಎಲ್ ತಂಡವೊಂದರ ಜತೆಗೂ ಕಾರ್ಯನಿರ್ವಹಿಸಿದ್ದರು ಎಂಬುದು ವಿಶೇಷ. ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆದಿರುವ ವೆಂಕಟದತ್ತ ಈ ಮುನ್ನ ಜೆಎಸ್ಡಬ್ಲ್ಯು ಸಂಸ್ಥೆ ಜತೆಗೆ ಕಿರು ಅವಧಿಗೆ ಕಾರ್ಯನಿರ್ವಹಿಸಿದ್ದರು. ಜೆಎಸ್ಡಬ್ಲ್ಯು ಸಂಸ್ಥೆ ಐಪಿಎಲ್ನಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ-ಒಡೆತನವನ್ನೂ ಹೊಂದಿದೆ. ಹೀಗಾಗಿ ವೆಂಕಟದತ್ತ ಕೂಡ ಆ ಸಮಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮ್ಯಾನೇಜ್ ಮಾಡಿದ್ದರು.