ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿನೇಶ್ ಫೋಗಟ್..! ರಾಜಕೀಯ ಪ್ರವೇಶದ ಬಗ್ಗೆ ಹೇಳಿದ್ದೇನು?

vinesh (1)
Published on

ನವದೆಹಲಿ: ಪಂಜಾಬ್​ನ ಶಂಭು ಮತ್ತು ಖಾನೌರಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಶನಿವಾರ(ಆ.31) 200 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಒಲಿಂಪಿಯನ್ ವಿನೇಶ್ ಫೋಗಟ್ ಭಾಗವಹಿಸಿದ್ದರು.

ರೈತರು ಬೆಳೆದ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಸಕ್ರಮಗೊಳಿಸುವಂತೆ ಆಗ್ರಹಿಸಿ 2023 ಆಗಸ್ಟ್ 31 ರಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ 1ವರ್ಷ ತುಂಬಿದ ಹಿನ್ನೆಲೆಯಲ್ಲಿ ಶನಿವಾರ(ಆ.31) ಫೋಗಟ್ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಸುದ್ದಿಗಾರರು, ಹರಿಯಾಣದಿಂದ ಕಾಂಗ್ರೆಸ್ ಪಕ್ಷದೊಂದಿಗೆ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಫೋಗಟ್, "ನಾನು ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ, ನಾನು ನನ್ನ ಕುಟುಂಬ ಸದಸ್ಯರನ್ನು (ರೈತರು) ಭೇಟಿ ಮಾಡಲು ಬಂದಿದ್ದೇನೆ. ನೀವು ಸಮಸ್ಯೆ ಬೇರೆಡೆ ತಿರುಗಿಸುವುದು ಬೇಡ. ರೈತರ ಹೋರಾಟದ ಮೇಲೆ ಕೇಂದ್ರೀಕರಿಸಬೇಕು. ಭಾರತೀಯ ಪ್ರಜೆಯಾದ ನನಗೆ ರಾಜಕಾರಣ ಮುಖ್ಯವಲ್ಲ, ರೈತರ ಕಲ್ಯಾಣ ಮುಖ್ಯ ಎಂದರು.

ಜನರು ಯಾವುದೇ ವಿಷಯವನ್ನು ಎತ್ತಿದಾಗ ಅವರನ್ನು ರಾಜಕೀಯ, ಧರ್ಮ ಮತ್ತು ಸಮುದಾಯದ ಕೋನದಿಂದ ನೋಡಬಾರದು. ಸಮಸ್ಯೆ ಮುಂದಿಟ್ಟು ಹೋರಾಡುವ, ಮತ್ತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಅವರಿಗಿದೆ. ರೈತರ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು, ರೈತ ಕುಟುಂಬದಿಂದ ಬಂದಿರುವ ತನಗೆ ತನ್ನ ತಾಯಿ ಹೇಗೆ ಬೆಳೆಸಿದ್ದಾಳೆ ಎಂಬುದು ಚೆನ್ನಾಗಿ ಗೊತ್ತಿದೆ ಎಂದರು.

200 ದಿನಗಳಿಂದ ರೈತರು ಇಲ್ಲೇ ಕುಳಿತಿರುವುದು ನೋವಿನ ಸಂಗತಿ. ಅವರೆಲ್ಲರೂ ಭಾರತದ ಪ್ರಜೆಗಳು. ದೇಶದ ರೈತರು. ರೈತರಿಲ್ಲದೆ ಯಾವುದೂ ಸಾಧ್ಯವಿಲ್ಲ. ಅವರು ಅಗತ್ಯ ಆಹಾರ ನೀಡದಿದ್ದರೆ ಕ್ರಿಡಾಪಟುಗಳು ಸಹ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು.

ಸರ್ಕಾರ ರೈತರ ಮಾತು ಕೇಳಬೇಕು. ಭರವಸೆಗಳನ್ನು ಈಡೇರಿಸಬೇಕು. ರಸ್ತೆಗಳಲ್ಲಿ ರೈತರು ಕುಳಿತುಕೊಂಡಿದ್ದರೆ ದೇಶವು ಪ್ರಗತಿ ಸಾಧಿಸಲ್ಲ. ರೈತರ ಹೋರಾಟಕ್ಕೆ ನನ್ನ ಬೆಂಬಲವಿದೆ ನಿಮ್ಮ ಉದ್ದೇಶ ಈಡೇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಿಮ್ಮ ಹೆಣ್ಣುಮಕ್ಕಳು ನಿಮಗೆ ಸಹಾಯ ಮಾಡುತ್ತಾರೆ. ರೈತರ ಬೇಡಿಕೆಗಳು ಕಾನೂನುಬಾಹಿರವಲ್ಲ ಎಂದು ಫೋಗಟ್ ಹೇಳಿದರು. ಈ ಸಂದರ್ಭದಲ್ಲಿ ರೈತರು ಫೋಗಟ್ ಅವರನ್ನು ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net