

ಬೆಂಗಳೂರು: 'ಅನಂತು ವರ್ಸಸ್ ನುಸ್ರತ್' ಚಿತ್ರ ಬಿಡಗುಡೆಯಾಗಿದ್ದೇ ಕೊನೆ. ಈ ನಾಲ್ಕು ವರ್ಷಗಳಲ್ಲಿ ವಿನಯ್ ರಾಜಕುಮಾರ್ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರಾದರೂ, ಅವರ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಈಗ ವಿನಯ್ ಅಭಿನಯದ ಚಿತ್ರವೊಂದು ಬಿಡುಡೆಯಾಗುವುದಕ್ಕೆ ಸಜ್ಜಾಗಿದೆ. ಅದೇ 'ಟೆನ್'.
ಇದನ್ನೂ ಓದಿ: ‘ಜಸ್ಟ್ ಪಾಸ್’ ಆಗಲು ಹೊರಟ ಶ್ರೀಗೆ ನಾಯಕಿ ಸಿಕ್ಕಳು …
ಮೂರು ವರ್ಷಗಳ ಹಿಂದೆ ವಿನಯ್ ಅಭಿನಯದಲ್ಲಿ ಚಿತ್ರವೊಂದನ್ನು ಘೋಷಿಸಿದ್ದರು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ. ಬಾಕ್ಸಿಂಗ್ ಕುರಿತಾದ ಈ ಚಿತ್ರದಲ್ಲಿ ವಿನಯ್ ರಾಜಕುಮಾರ್ ಬಾಕ್ಸರ್ ಆಗಿ ಅಭಿನಯಿಸಿದ್ದರು. ಚಿತ್ರವೇನೋ ಅಂದುಕೊಂಡಂತೆ ಬಹಳ ವೇಗವಾಗಿ ಮುಗಿಯಿತು. ಆದರೆ, ಕರೊನಾದಿಂದ ಸಾಕಷ್ಟು ವಿಳಂಬವಾಯಿತು. ಈಗ ಚಿತ್ರ ಸಂಪೂರ್ಣವಾಗಿದ್ದು, ಮುಂದಿನ ವಾರ ಅಂದರೆ ಡಿ.16ರ ಶುಕ್ರವಾರದಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ, ಈ ಚಿತ್ರದ ಮೂಲಕ ಛಾಯಾಗ್ರಾಹಕ ಕರಮ್ ಚಾವ್ಲಾ ನಿರ್ದೇಶಕರಾಗಿದ್ದಾರೆ. ಈ ಹಿಂದೆ, 'ಉಳಿದವರು ಕಂಡಂತೆ', 'ಕಿರಿಕ್ ಪಾರ್ಟಿ' ಮುಂತಾದ ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದ ಕರಮ್, '10' ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಇಷ್ಟಕ್ಕೂ '10' ಎಂದರೇನು? ಎಂಬ ಪ್ರಶ್ನೆ ಬರಬಹುದು. ಬಾಕ್ಸಿಂಗ್ನಲ್ಲಿ ಈ ಸಂಖ್ಯೆಗೆ ಬಹಳ ಮಹತ್ವವಿದ್ದು, ಒಬ್ಬ ಆಟಗಾರ ಪೆಟ್ಟು ತಿಂದು ನೆಲಕ್ಕೆ ಬಿದ್ದಾಗ, ಅವನು ಪುನಃ ಏಳುವುದಕ್ಕೆ 10 ಎಣಿಸಲಾಗುತ್ತದೆ. ಅದನ್ನೇ ಈ ಚಿತ್ರಕ್ಕೆ ಶೀರ್ಷಿಕೆಯನ್ನಾಗಿ ಇಡಲಾಗಿದೆ.
'10' ಚಿತ್ರದಲ್ಲಿ ವಿನಯ್ ರಾಜಕುಮಾರ್ಗೆ ನಾಯಕಿಯಾಗಿ ಅನೂಷಾ ರಂಗನಾಥ್ ನಟಿಸಿದ್ದು, ಮಿಕ್ಕಂತೆ ಗೋಪಾಲಕೃಷ್ಣ ದೇಶಪಾಂಡೆ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.