

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಬೆಳ್ಳಿರಥ ದಾನಿಗಳಿಂದ ನಿರ್ಮಾಣಗೊಳ್ಳಲಿದೆ. ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥವನ್ನು ಸೇವಾರೂಪದಲ್ಲಿ ಸುಳ್ಯದ ಶಿಲ್ಪಿ ಕುರುಂಜಿ ವೆಂಕಟ್ರಮಣ ಗೌಡರ ಪುತ್ರ ಡಾ.ಕೆ.ವಿ.ರೇಣುಕಾಪ್ರಸಾದ್ ಕುರುಂಜಿ ಸಮರ್ಪಿಸಲಿದ್ದಾರೆ. 1 ಕೋಟಿ ರೂ. ಮೌಲ್ಯದಲ್ಲಿ ರಥ ನಿರ್ಮಾಣಗೊಳ್ಳಲಿದೆ. ಜೂನ್ 14ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸೇವಾಕರ್ತ ದಾನಿಗಳಿಗೆ ಬೆಳ್ಳಿರಥ ನಿರ್ಮಾಣ ಕಾರ್ಯಕ್ಕೆ ವೀಳ್ಯ ನೀಡಲಾಗುವುದು.
ಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯರ ಉಸ್ತುವಾರಿಯಲ್ಲಿ ಅವರ ಪುತ್ರ ಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ ರಥ ನಿರ್ಮಾಣ ಮಾಡಲಿದ್ದಾರೆ. ವೀಳ್ಯ ನೀಡುವ ವೇಳೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಸಚಿವ ರನಾಥ ರೈ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಶಿಲ್ಪಿ ರಾಜಗೋಪಾಲಾಚಾರ್ಯ ಕೋಟೇಶ್ವರ, ಶಾಸಕರಾದ ಭಾಗಿರಥಿ ಮುರುಳ್ಯ, ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಪಂಚ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿರುವರು ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ತಿಳಿಸಿದ್ದಾರೆ.