

ವಿಜಯವಾಣಿ ಸುದ್ದಿಜಾಲ, ಪುತ್ತೂರು ಗ್ರಾಮಾಂತರ
ಪುತ್ತೂರು ತಾಲೂಕಿನ ಅರಿಯಡ್ಕ ಮತ್ತು ಕೆದಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಡಸಾಗು ಜನತಾ ಕಾಲನಿ, ಮಜ್ಜಾರಡ್ಕ, ಗೋಳ್ತಿಲ ವ್ಯಾಪ್ತಿಯಲ್ಲಿ ನೊಣಗಳ ಕಾಟ ಅತಿಯಾಗಿದೆ. ಆಹಾರ ಪದಾರ್ಥಗಳನ್ನು ತಯಾರಿಸಲು ಮತ್ತು ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದಡೆ ಸಾಂಕ್ರಾಮಿಕ ರೋಗ ಭೀತಿಯೂ ಎದುರಾಗಿದೆ.
ಎಂಡಸಾಗು ಜನತಾ ಕಾಲನಿ, ಮಜ್ಜಾರಡ್ಕ, ಗೋಳ್ತಿಲ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ನೊಣಗಳ ಹಾವಳಿ ಕಾಣಿಸಿಕೊಂಡಿದೆ. ಪಾತ್ರೆ, ತಿಂಡಿತಿನಿಸುಗಳ ಮೇಲೆ ಅಪಾರ ಪ್ರಮಾಣದಲ್ಲಿ ನೋಣಗಳು ಬಂದು ಕುಳಿತುಕೊಳ್ಳುತ್ತಿವೆ. ಅಲ್ಲದೆ ಪರಿಸರದಲ್ಲಿ ದುರ್ವಾಸನೆ ಬೀರುತ್ತಿದೆ ಎಂದು ಅಲ್ಲಿನ ನಿವಾಸಿಗಳು ಅಳಲು ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿರುವ ಸುಮಾರು 10 ಕೋಳಿ ಫಾರ್ಮ್ಗಳಿದ್ದು, ಈ ಪೈಕಿ ಎಂಡಸಾಗು ವ್ಯಾಪ್ತಿಯಲ್ಲಿರುವ ಅಪಾರ ಸಂಖ್ಯೆಯ ಕೋಳಿಗಳ ಸಾಕಣೆಯ ದೊಡ್ಡ ಕೋಳಿ ಫಾರ್ಮ್ ಒಂದರಲ್ಲಿ ನಿರ್ವಹಣೆ ಕೊರತೆಯಿಂದಾಗಿ ನೊಣಗಳು ಉತ್ಪತ್ತಿಯಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ಈ ಬಗ್ಗೆ ಎಂಡಸಾಗು ಜನತಾ ಕಾಲನಿ ನಿವಾಸಿಗಳು ಆರೋಗ್ಯ ಇಲಾಖೆ ಹಾಗೂ ಅರಿಯಡ್ಕ ಮತ್ತು ಕೆದಂಬಾಡಿ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ.
ಸಂತ್ರಸ್ತ ಪ್ರದೇಶಗಳಿಗೆ ಕೆದಂಬಾಡಿ ಪಿಡಿಒ ಅಜಿತ್ ಜಿ.ಕೆ., ಅರಿಯಡ್ಕ ಪಿಡಿಒ ಸುನೀಲ್ ಎಚ್.ಟಿ., ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪಿಎಚ್ಸಿಒ ವಿದ್ಯಾ, ಆಶಾ ಕಾರ್ಯಕರ್ತೆ ರೇಖಾ, ಅರಿಯಡ್ಕ ಗ್ರಾಮದ ಪಿಎಚ್ಸಿಒ ನವ್ಯಾ, ಆಶಾ ಕಾರ್ಯಕರ್ತೆ ಲೀಲಾವತಿ, ತಾಲೂಕು ಎಚ್ಐಒ ಯಚ್ಚರೇಶ ಹದ್ಲಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮನೆಗಳಿಗೆ, ಕೋಳಿ ಫಾರಂ ಪರಿಶೀಲನೆ
ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಗ್ರಾಮ ಸಮುದಾಯ ಆರೋಗ್ಯಾಧಿಕಾರಿಗಳಾದ ವಿದ್ಯಾ, ನವ್ಯಾ, ತಾಲೂಕು ಎಚ್.ಐ.ಒ.ಯಚ್ಚರೇಶ ಹದ್ದಿ ಅವರನ್ನೊಳಗೊಂಡ ತಂಡ ಸೋಮವಾರ ನೊಣ ಬಾಧಿತ ಪ್ರತಿ ಮನೆಗಳಿಗೆ, ಕೋಳಿ ಫಾರ್ಮ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಳಿ ಫಾರ್ಮ್ಗಳ ನಿರ್ವಹಣೆಯನ್ನು ಸರಿಯಾಗಿ ಇಟ್ಟುಕೊಳ್ಳುವಂತೆ ಸೂಚಿಸಿದ್ದಾರೆ. ಒಳಮೊಗ್ರು ಗ್ರಾಪಂ ವ್ಯಾಪ್ತಿಯ ಪರ್ಪುಂಜ, ಉರ್ವ, ಉಜಿರೋಡಿ, ಆಲಂಬಾಡಿ ಪರಿಸರದಲ್ಲಿಯೂ ನೊಣಗಳ ಹಾವಳಿ ಇದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಎಂಡೆಸಾಗು, ಮಜ್ಜಾರಡ್ಕ ಪರಿಸರದಲ್ಲಿ ನೊಣಗಳ ಹಾವಳಿ ಅತಿಯಾಗಿರುವ ಕುರಿತು ಆರೋಗ್ಯ ಇಲಾಖೆಗೆ ದೂರು ಬಂದಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕೋಳಿ ಫಾರ್ಮ್ ಅಥವಾ ಇನ್ಯಾವುದೋ ಮೂಲಗಳಿಂದ ನೊಣ ಉತ್ಪತ್ತಿಯಾಗುತ್ತಿರಬಹುದು. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಡಾ.ದೀಪಕ್ ರೈ ತಾಲೂಕು ಆರೋಗ್ಯಾಧಿಕಾರಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ನೊಣಗಳ ಹಾವಳಿ ಹಾಗೂ ದುರ್ವಾಸನೆಯಿಂದ ಸಮಸ್ಯೆ ಉಂಟಾಗಿದೆ. ನೊಣಗಳು ರಾಶಿ ರಾಶಿಯಾಗಿ ಬಂದು ಪಾತ್ರೆ, ತಿನಿಸುಗಳ ಮೇಲೆ ಕುಳಿತುಕೊಳ್ಳುತ್ತಿವೆ. ಇದರಿಂದ ಬಹಳಷ್ಟು ತೊಂದರೆಯಾಗಿದೆ. ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು. ಕೃಷ್ಣಪ್ಪ ಅಜಿಲ ಎಂಡೆಸಾಗು ಈ ಭಾಗದಲ್ಲಿ ಸುಮಾರು 10ರಷ್ಟು ಕೋಳಿ ಫಾರ್ಮ್ಗಳಿದ್ದು, ನಿರ್ವಹಣೆ ಕೊರತೆ ಇರುವ ಕೋಳಿ ಫಾರ್ಮ್ ಕೆದಂಬಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಆದರೆ ಹೆಚ್ಚಿನ ಸಮಸ್ಯೆ ಅರಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಆಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಸೂಕ್ತಕ್ರಮ ಕೈಗೊಳ್ಳಲಿದ್ದಾರೆ. ರಾಜೇಶ್ ಮಜ್ಜಾರು, ಅರಿಯಡ್ಕ ಗ್ರಾ.ಪಂ.ಸದಸ್ಯ