ಕಡಬ: ಹಿಂದು ಕಾರ್ಯಕರ್ತರ ಮನೆಗೆ ರಾತ್ರಿ ಪೊಲೀಸರು ತೆರಳಿ ಜಿಪಿಎಸ್ ಫೋಟೋ ತೆಗೆದ ಪ್ರಕರಣದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಕಡಬಕ್ಕೆ ಭೇಟಿ ನೀಡಿ ಹಿಂದು ಕಾರ್ಯಕರ್ತರಿಂದ ಮಾಹಿತಿ ಸಂಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ನಡೆದ ಹತ್ಯೆ ಪ್ರಕರಣ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನೂತನ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ಸೂಚನೆ ಮೇರೆಗೆ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಪ್ರಮುಖರ ಮಾಹಿತಿ ಸಂಗ್ರಹಿಸಲು ಪೊಲೀಸರು ಆರಂಭಿಸಿದ್ದರು. ರಾತ್ರಿ ವೇಳೆ ಕಡಬದಲ್ಲಿ ಹಿಂದು ಸಂಘಟನೆಗಳಲ್ಲಿ ಗುರುತಿಸಿಕೊಂಡವರ ಮನೆಗೆ ತೆರಳಿ ಜಿಪಿಎಸ್ ಫೋಟೋ ತೆಗೆದುಕೊಂಡು ಹೋಗಿದ್ದರು. ಪೊಲೀಸರ ಈ ಕ್ರಮಕ್ಕೆ ಹಿಂದು ಸಂಘಟನೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಕಡಬ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಠಾಣೆ ಮುಂದೆ ಜಮಾಯಿಸಿದ್ದ ಹಿಂದು ಸಂಘಟನೆ ಪ್ರಮುಖರು ಹಾಗೂ ಕಾರ್ಯಕರ್ತರ ವಿರುದ್ಧ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿದ್ದಲ್ಲದೆ, ಹಲವರಿಗೆ ಜಿಲ್ಲೆಯಿಂದ ಗಡೀಪಾರು ಆದೇಶ ನೋಟಿಸ್ ನೀಡಲಾಗಿತ್ತು.
ಕಡಬ ವಿಶ್ವಹಿಂದು ಪರಿಷತ್ ಮುಖಂಡರೊಬ್ಬರ ಮನೆಯಲ್ಲಿ ಹಿಂದು ಕಾರ್ಯಕರ್ತರೊಂದಿಗೆ ಮಾನವ ಹಕ್ಕು ಆಯೋಗದ ಡಿವೈಎಸ್‌ಪಿ ಮನಿಂದರ್ ಗಿಲ್ ನೇತೃತ್ವದ ಅಧಿಕಾರಿಗಳ ತಂಡ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.
ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸಾದ್, ಕಡಬ ಪ್ರಖಂಡದ ಪ್ರಮುಖರಾದ ರಾಧಾಕೃಷ್ಣ ಕೋಲ್ಪೆ, ಪ್ರಮೋದ್ ರೈ, ಜಯಂತ್ ಕಲ್ಲುಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
ಸರ್ಕಾರಿ ಪ್ರೇರಿತ ಪೊಲೀಸ್ ದೌರ್ಜನ್ಯ
ಹಿಂದುಗಳ ಮೇಲೆ ಸರ್ಕಾರಿ ಪ್ರೇರಿತ ಪೊಲೀಸ್ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಹಿಂದು ಪರ ಸಂಘಟನೆಗಳು ಹೋರಾಟ ನಡೆಸಿವೆ. ಕೇಂದ್ರ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಆಗಮಿಸಿದ್ದ ಕೇಂದ್ರ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಕಡಬಕ್ಕೆ ಆಗಮಿಸಿ ಹಿಂದು ಕಾರ್ಯಕರ್ತರಿಂದ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.