ಅಧಿಕಾರಿಗಳ ಗೈರಿಗೆ ಗ್ರಾಮಸ್ಥರ ಆಕ್ರೋಶ

sabhe-1
Published on

ವಿಜಯವಾಣಿ ಸುದ್ದಿಜಾಲ ಕೋಟ

ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸಭೆ ಹಂದಟ್ಟು ದಾನಗುಂದು ಗೆಳೆಯರ ಬಳಗ ಸಭಾಂಗಣದಲ್ಲಿ ಮಂಗಳವಾರ ಜರುಗಿತು. ಪ್ರಮುಖ ಅಧಿಕಾರಿಗಳು ಗೈರಾಗಿದ್ದರಿಂದ ಗ್ರಾಮಸ್ಥರು ಅಸಮಾಧಾನಗೊಂಡಿದ್ದು, ಸಭೆ ಮುಂದೂಡುವಂತೆ ಪಟ್ಟು ಹಿಡಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್ ಈ ಕುರಿತು ಸ್ಪಷ್ಟೀಕರಣ ನೀಡಲು ಯತ್ನಿಸಿದರೂ ನೆರೆದಿದ್ದವರು ಸಭೆ ಬಹಿಷ್ಕರಿಸುವಂತೆ ಘೋಷಣೆ ಕೂಗಿ ಅಡಚಣೆ ಉಂಟುಮಾಡಿದ್ದರಿಂದ ಅಸಾಧ್ಯವಾಯಿತು.

ಕೃಷಿಕ ಶಿವಮೂರ್ತಿ ಮಾತನಾಡಿ, ಅತಿಯಾದ ಕಾಂಡ್ಲವನದಿಂದ ಹೊಳೇ ಭಾಗ ಕಾಂಡ್ಲದಿಂದ ಮುಚ್ಚಿಕೊಂಡಿದೆ. ಇದರಿಂದ ನೀರು ಸುಗಮವಾಗಿ ಹರಿಯಲಾಗದೆ ಕೃಷಿ ಭೂಮಿಗಳತ್ತ ಹರಿಯುತ್ತಿದೆ. ಪ್ರಸ್ತುತ ಸೌತೆ ಕೃಷಿ ಮಾಡಿದ್ದು, ನವಿಲು ಹಾಗೂ ಮುಳ್ಳು ಹಂದಿಗಳ ಉಪಟಳದಿಂದ ಸಂಪೂರ್ಣ ನಾಶದ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸುರಕ್ಷತೆ ಕ್ರಮ ವಹಿಸಬೇಕಿದೆ ಎಂದು ಮನವಿ ಮಾಡಿದರು.

ಅರಣ್ಯ ಇಲಾಖೆಯ ಮಹಂತೇಶ್ ಅಳಲಗೇರಿ ಪ್ರತಿಕ್ರಿಯಿಸಿ, ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಪಂಚಾಯಿತಿ ಸದಸ್ಯ ಎಚ್.ಪ್ರಮೋದ್ ಹಂದೆ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಿಡಗಳನ್ನು ನೆಟ್ಟರೂ ಅದರ ಆರೈಕೆ ಅಸಮರ್ಪಕವಾಗಿ ಆಗುತ್ತಿದೆ. ಜತೆಗೆ ಮೆಸ್ಕಾಂ ಇಲಾಖೆಯೂ ಮರಗಳಿಗೆ ಕಡಿವಾಣ ಹಾಕುತ್ತಿದೆ. ಇದು ಪರಿಸರ ಸಂರಕ್ಷಣೆ ಮೇಲೆ ಮಾರಕ ಪರಿಣಾಮ ಬೀರುತ್ತಿವೆ ಎಂದರು.

ಅರಣ್ಯಾಧಿಕಾರಿ ಉತ್ತರಿಸಿ, ಹೆದ್ದಾರಿಗಳಲ್ಲಿ ಗಿಡಗಳನ್ನು ನೆಟ್ಟ ಬಳಿಕ ಹೆದ್ದಾರಿ ಪ್ರಾಧಿಕಾರದವರೇ ಅವುಗಳನ್ನು ಸೂಕ್ತವಾಗಿ ನಿರ್ವಹಿಸಬೇಕು ಎಂದು ಹೇಳಿದರು. ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್ ಅವರಿಗೆ ಗ್ರಾಮಸ್ಥರು ವಿವಿಧ ಸಮಸ್ಯೆಗಳ ನಿವಾರಿಸುವಂತೆ ಮನವಿ ಸಲ್ಲಿಸಿದರು. ನೋಡಲ್ ಅಧಿಕಾರಿ ಡಾ.ಅನಿಲ್ ಕುಮಾರ್, ಗ್ರಾಪಂ ಉಪಾಧ್ಯಕ್ಷೆ ಸರಸ್ವತಿ ಪೂಜಾರಿ, ಮಾಜಿ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್, ವಿವಿಧ ಇಲಾಖಾಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಸುಮತಿ ಅಂಚನ್ ವರದಿ ಮಂಡಿಸಿದರು. ಪಿಡಿಒ ರವೀಂದ್ರ ರಾವ್ ನಿರೂಪಿಸಿದರು. ಸಿಬ್ಬಂದಿ ನವೀನ್ ಸಹಕರಿಸಿದರು.

ಕೊಳಚೆ ವಿರುದ್ಧ ಕ್ರಮಕ್ಕೆ ಆಗ್ರಹ

ಕೋಟತಟ್ಟು ಗ್ರಾಮಸ್ಥ ರತ್ನಾಕರ ಬಾರಿಕೆರೆ ಮಾತನಾಡಿ, ಕೋಟದ ಖಾಸಗಿ ಹೋಟೆಲೊಂದರ ಕೊಳಚೆ ನೀರಿನಿಂದ ಪರಿಸರದಲ್ಲಿ ದುರ್ವಾಸನೆ ಉಂಟಾಗಿದೆ. ಇದು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಶೀಘ್ರವೇ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಆರೋಗ್ಯ ಅಧಿಕಾರಿ ಡಾ.ಮಾಧವ ಪೈ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಕೃಷಿ ಭೂಮಿಗೆ ಉಪ್ಪು ನೀರಿನ ಭೀತಿ

ಹಂದಟ್ಟು ಪರಿಸರದ ಹೊಳೆ ಸಮೀಪದ ಸ್ಥಳಕ್ಕೆ ಮಣ್ಣು ತುಂಬಿಸಲಾಗುತ್ತಿದ್ದು, ಕೃಷಿಭೂಮಿಗಳಿಗೆ ಉಪ್ಪು ನೀರು ಹರಿದು ಕೃಷಿ ನಾಶಾವಾಗುವ ಭೀತಿ ಇದೆ. ಈ ಕುರಿತು ಮುಂಜಾಗ್ರತೆ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಪಂಚಾಯಿತಿ ಸದಸ್ಯ ಪ್ರಕಾಶ್ ಹಂದಟ್ಟು ಪ್ರತಿಕ್ರಿಯಿಸಿ, ಕೋಟತಟ್ಟು ಭಾಗದಲ್ಲಿ ಸುಸಜ್ಜಿತ ಕ್ರೀಡಾಂಗಣಗಳಿಲ್ಲ. ಅದಕ್ಕಾಗಿ ಈ ಸ್ಥಳ ಆಯ್ಕೆಗೊಳಿಸಿದ್ದು, ಕೆಲವರು ಈ ಸ್ಥಳಕ್ಕೆ ಮಣ್ಣು ಹಾಕುತ್ತಿದ್ದಾರೆ. ಈ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net