ಮಲೇಷ್ಯಾದಲ್ಲಿ ವಿಜಯವಾಣಿ 'ವಿಜಯರತ್ನ' ಇಂಟರ್​ನ್ಯಾಷನಲ್​ 2025 ವೈಭವ; 28 ಸಾಧಕರಿಗೆ ಗೌರವ ಪ್ರದಾನ

ವಿಜಯವಾಣಿ (10)
Published on

ಕೌಲಾಲಂಪುರ: ಕನ್ನಡದ ನಂ.1 ದಿನಪತ್ರಿಕೆ 'ವಿಜಯವಾಣಿ'ಯ ಹೆಮ್ಮೆಯ ಕೊಡುಗೆ ‘ವಿಜಯರತ್ನ ಇಂಟರ್ ನ್ಯಾಷನಲ್ ಅವಾರ್ಡ್ - 2025’ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚಿಗೆ ಮಲೇಷ್ಯಾದ ರಾಜಧಾನಿ ಕೌಲಾಲಂಪುರದಲ್ಲಿ ಅದ್ದೂರಿಯಾಗಿ ಜರುಗಿತು.

ಕನ್ನಡದ ನಂ.1 ಪತ್ರಿಕೆ ಚೊಚ್ಚಲ ಅಂತಾರಾಷ್ಟ್ರೀಯ ಅವಾರ್ಡ್ ಭರ್ಜರಿ ಯಶಸ್ಸು

ಪಂಚತಾರಾ ಹೋಟೆಲ್ ಒಂದರಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕನ್ನಡ ನಾಡಿನ 28 ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮಲೇಷ್ಯಾದಲ್ಲಿನ ಭಾರತದ ರಾಯಭಾರಿ ಡಾ.ಬಿ.ಎನ್.ರೆಡ್ಡಿ ಮತ್ತು ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಅವರು ಪ್ರಶಸ್ತಿ ಪುರಸ್ಕೃತರಿಗೆ ಟ್ರೋಫಿ ನೀಡಿ ಗೌರವಿಸಿದರು. ಕಾರ್ಯಕ್ರಮ ಆರಂಭದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿದರೆ ನಂತರ ಮಲೇಷ್ಯಾದ ರಾಷ್ಟ್ರಗೀತೆ ಮಾರ್ದನಿಸಿತು. ಬಳಿಕ ಡಾ.ಆನಂದ ಸಂಕೇಶ್ವರ, ಡಾ. ಬಿ.ಎನ್.ರೆಡ್ಡಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಸಹೋದರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟಿ ಸುರೇಂದ್ರ ಕುಮಾರ್ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿದೇಶಿ ನೆಲದಲ್ಲಿ ಭಾರತೀಯರ ಪ್ರಭಾವ

ಮಲೇಷ್ಯಾದಲ್ಲಿ ನೆಲೆಸಿರುವ ಸುಮಾರು 2 ದಶಲಕ್ಷ ಭಾರತೀಯರು, ಭಾರತ ದೇಶದ ಆಶೋತ್ತರಗಳ ಪ್ರತಿಬಿಂಬವಾಗಿ ಕೆಲಸ ಮಾಡುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿರುವ ಕನ್ನಡಿಗರು ಕೂಡ ಉಭಯ ದೇಶಗಳ ನಡುವೆ ಸಾಂಸ್ಕೃತಿಕ ಹಾಗೂ ವ್ಯಾಪಾರ ವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ವಿಜಯವಾಣಿಯು, ಕನ್ನಡಿಗ ಸಾಧಕರನ್ನು ಗುರುತಿಸಿ ಅವರನ್ನು ಜಗತ್ತಿಗೆ ಪರಿಚಯಿಸುತ್ತಿರುವುದು ಶ್ಲಾಘನೀಯ ಕಾರ್ಯ. ಮಲೇಷ್ಯಾದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲು ವಿಜಯವಾಣಿಗೆ ಹಲವು ಕಾರಣಗಳಿರಬಹುದು. ಆದರೆ,ವಿದೇಶಿ ನೆಲದಲ್ಲಿ ಹೆಚ್ಚುತ್ತಿರುವ ಭಾರತೀಯರ ಪ್ರಭಾವಕ್ಕೆ ಇಂತಹ ಕಾರ್ಯಕ್ರಮಗಳು ಸಾಕ್ಷಿಯಾಗಿವೆ ಎಂದು ಡಾ. ಬಿ.ಎನ್.ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ದ್ವಿಪಕ್ಷೀಯ ಹಾಗೂ ಜನರ ನಡುವೆ ಸಂಬಂಧ ವೃದ್ಧಿಯಲ್ಲಿ ಮೀಡಿಯಾ ಪಾತ್ರ ಕೂಡ ಮುಖ್ಯ. ಸಾಧಕರು ಪ್ರೇರಕ ಶಕ್ತಿಯಾಗಿ ಕೆಲಸ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಉತ್ತಮ ಕಾರ್ಯ ಮಾಡುತ್ತಿರುವ ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ.ಆನಂದ ಸಂಕೇಶ್ವರ ಅವರಿಗೆ ಅಭಿನಂದನೆ ಸಲ್ಲಿಸಿದರು.

ಕೌಲಾಲಂಪುರದಲ್ಲಿ ವಿಜಯವಾಣಿ ಕನ್ನಡ ನಾಡಿನ ಸಾಧಕರನ್ನು ವಿದೇಶಕ್ಕೆ ಪರಿಚಯಿಸುತ್ತಿರುವುದು ಉತ್ತಮ ಕಾರ್ಯ. ಪರಸ್ಪರ ಜನರನ್ನು ಸಂರ್ಪಸುವ ಇಂತಹ ಸಮಾರಂಭಗಳು ನಿರಂತರವಾಗಿ ಮುಂದುವರಿಯಬೇಕು. ಇಂತಹ ಅದ್ಧೂರಿ ಕಾರ್ಯಕ್ರಮವನ್ನು ತಾವೆಂದೂ ಇಲ್ಲಿ ಕಂಡಿರಲಿಲ್ಲ ಎಂದು ರೆಡ್ಡಿ ಹರ್ಷ ವ್ಯಕ್ತಪಡಿಸಿದರು. ವಿಜಯವಾಣಿಯ ಮನವಿಗೆ ಒಪ್ಪಿ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಪ್ರೇರಣಾದಾಯಕ ಮಾತುಗಳಿಂದ ಹುರಿದುಂಬಿಸಿದ ಹೈ ಕಮಿಷನರ್ ಡಾ. ಬಿ.ಎನ್.ರೆಡ್ಡಿ ಅವರಿಗೆ ಡಾ. ಆನಂದ ಸಂಕೇಶ್ವರ ಅವರು ವಿಜಯವಾಣಿ ಬಳಗದ ಪರವಾಗಿ ಸ್ಮರಣಿಕೆ ನೀಡಿದರು. ಕಾರ್ಯಕ್ರಮದಲ್ಲಿ ವಿಆರ್​ಎಲ್ ಮೀಡಿಯಾ ಉಪಾಧ್ಯಕ್ಷ ಅರುಣ್ ಕರಡಿ ಉಪಸ್ಥಿತರಿದ್ದರು. ವಿಜಯವಾಣಿ ಡಿಜಿಟಲ್ ಸಂಪಾದಕ ಸಿದ್ದು ಕಾಳೋಜಿ ಕಾರ್ಯಕ್ರಮ ನಿರೂಪಿಸಿದರು.

28 ಸಾಧಕರಿಗೆ ವಿಜಯವಾಣಿ ಗೌರವ ಪ್ರದಾನ

ಭಾರತ-ಮಲೇಷ್ಯಾ ಮಧ್ಯೆ ಬಾಂಧವ್ಯ ವೃದ್ಧಿ

ಭಾರತ ಹಾಗೂ ಮಲೇಷ್ಯಾ ಜನರ ನಡುವೆ ಸಾಂಪ್ರದಾಯಿಕ, ಸಾಂಸ್ಕೃತಿಕ ಸಂಬಂಧ ವೃದ್ಧಿ ಮಾತ್ರವಲ್ಲದೆ, ಬಾಹ್ಯಾಕಾಶ, ವಿಜ್ಞಾನ, ಡಿಜಿಟಲ್ ಆರ್ಥಿಕತೆ, ನವೀಕರಿಸಬಹುದಾದ ಇಂಧನ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಅಭಿವೃದ್ಧಿಗೆ ಪೂರಕವಾಗಿ ಉಭಯ ದೇಶಗಳು ಯೋಜನೆ ರೂಪಿಸುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಾಗೂ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರ ದೂರದೃಷ್ಟಿಯ ಫಲವಾಗಿ ಭಾರತ-ಮಲೇಷ್ಯಾ ಮಧ್ಯೆ ಬಾಂಧವ್ಯದ ಹೊಸ ಶಕೆ ಆರಂಭವಾಗಿದೆ. ನವನವೀನ ಕ್ಷೇತ್ರಗಳಲ್ಲಿ ವ್ಯಾಪಾರ-ವಹಿವಾಟು ಬಲವರ್ಧನೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಡಾ. ಬಿ.ಎನ್.ರೆಡ್ಡಿ ಪ್ರತಿಪಾದಿಸಿದರು.

ಸಾಧಕರು ಯುವ ಸಮುದಾಯಕ್ಕೆ ಪ್ರೇರಣೆ

ಮಲೇಷ್ಯಾದಲ್ಲಿನ ಭಾರತದ ಹೈಕಮಿಷನರ್ ಡಾ.ಬಿ.ಎನ್.ರೆಡ್ಡಿ ಅವರು ಎಲ್ಲ ಪ್ರಶಸ್ತಿ ಪುರಸ್ಕೃತರಿಗೂ ಕನ್ನಡದಲ್ಲೇ ಅಭಿನಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು. ತಾವು ಈ ಮೊದಲು ಮೂರು ದಶಕಗಳ ಹಿಂದೆ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ ಅನುಭವವನ್ನು ಮೆಲುಕು ಹಾಕುತ್ತಾ ಮಾತು ಮುಂದುವರಿಸಿದ ಅವರು, ಭಾರತ ಮತ್ತು ಮಲೇಷ್ಯಾ ಮಧ್ಯೆ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯದ ಬಗ್ಗೆ ವಿವರಿಸಿದರು. ನಿಮ್ಮಗಳ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮೂಲಕ ತಾವುಗಳು ರಾಜ್ಯದ, ದೇಶದ ಅಭಿವೃದ್ಧಿಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಗಣನೀಯ ಕೊಡುಗೆ ನೀಡುತ್ತಿರುವಿರಿ. ನಿಮ್ಮ ಈ ಅಭೂತಪೂರ್ವ ಸಾಧನೆಯು ಯುವ ಸಮುದಾಯಕ್ಕೆ ಪ್ರೇರಣೆ ಹಾಗೂ ದಾರಿದೀಪವಾಗಿದೆ ಎಂದು ರೆಡ್ಡಿ ಹೇಳಿದರು.

ಸಾಧನೆಗೆ ಪರಿಶ್ರಮ, ಛಲ ಮುಖ್ಯ

ಪ್ರಾಸ್ತಾವಿಕವಾಗಿ ಮಾತನಾಡಿದ ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ.ಆನಂದ ಸಂಕೇಶ್ವರ, ಹತ್ತಾರು ಕ್ಷೇತ್ರಗಳು, ನೂರಾರು ಸಾಧಕರಲ್ಲಿ ಕೆಲವೇ ಕೆಲವು ಸಾಧಕರನ್ನು ಶೋಧಿಸುವ ಕೆಲಸ ಸುಲಭವಾಗಿರಲಿಲ್ಲ. ಜೀರೋದಿಂದ ಹೀರೋ ಎಲ್ಲರೂ ಆಗಬಹುದು. ಆದರೆ, ನಿರಂತರ ಪರಿಶ್ರಮ ಹಾಗೂ ಸಾಧನೆಯ ಛಲ ಮುಖ್ಯ. ಇದಕ್ಕೆ ತಕ್ಕ ಉದಾಹರಣೆ ವಿಆರ್​ಎಲ್ ಸಮೂಹ ಸಂಸ್ಥೆಯಾಗಿದೆ. ನಮ್ಮ ತಂದೆ ಡಾ.ವಿಜಯ ಸಂಕೇಶ್ವರ 49 ವರ್ಷಗಳ ಹಿಂದೆ ಒಂದು ಟ್ರಕ್​ನಿಂದ ವಿಜಯಾನಂದ ರೋಡ್​ಲೈನ್ಸ್ ಆರಂಭಿಸಿದರು. ನಮ್ಮ ತಂದೆಯವರ ಕಠಿಣ ಪರಿಶ್ರಮ ಹಾಗೂ ಬದ್ಧತೆಯಿಂದಾಗಿ ಇಂದು ವಿಆರ್​ಎಲ್ ಪಯಣ 6,000ಕ್ಕೂ ಹೆಚ್ಚು ವಾಹನಗಳೊಂದಿಗೆ ಮುಂದುವರಿದಿದೆ.

ಕಾಶ್ಮೀರದಿಂದ ಕನ್ಯಾಕುಮಾರಿ ಉದ್ದಗಲಕ್ಕೂ 1,250ಕ್ಕೂ ಹೆಚ್ಚು ವಿಆರ್​ಎಲ್ ಶಾಖೆಗಳು ವ್ಯಾಪಿಸಿವೆ. ಇದೇ ರೀತಿ ವಿಜಯಾನಂದ ಟ್ರಾವೆಲ್ಸ್ ಹಾಗೂ ವಿಆರ್​ಎಲ್ ಮೀಡಿಯಾ ಮೂಲಕ ಸಮಾಜದ ಎಲ್ಲ ಸ್ತರದ ಜನರನ್ನು ತಲುಪುತ್ತಿದ್ದೇವೆ. ಇದಕ್ಕೆ ಪ್ರಮುಖ ಕಾರಣ, ಜನ ನಮ್ಮ ಮೇಲಿಟ್ಟಿರುವ ವಿಶ್ವಾಸ ಹಾಗೂ ನಂಬಿಕೆ ಎಂದು ಹೇಳಿದರು. ಮುಂಬರುವ ದಿನಗಳಲ್ಲಿ ಇಂತಹ ಇನ್ನೂ ಅನೇಕ ಅಂತಾರಾಷ್ಟ್ರೀಯ ಅವಾರ್ಡ್ ಕಾರ್ಯಕ್ರಮಗಳನ್ನು ವಿವಿಧ ದೇಶಗಳಲ್ಲಿ ಆಯೋಜಿಸುವ ಯೋಜನೆ ಹೊಂದಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net