

ಬೆಳಗಾವಿ: ಚಿಂತಕರ ಚಾವಡಿ ಎಂದು ಕರೆಯುವ ವಿಧಾನ ಪರಿಷತ್ನಲ್ಲಿ ವಿಜಯವಾಣಿ ಮೂರು ವರದಿಗಳು ಸೋಮವಾರ ಪ್ರತಿಧ್ವನಿಸಿ ಸರ್ಕಾರದ ಗಮನಸೆಳೆದವು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಪಿ.ಎಚ್.ಪೂಜಾರ್ ಮಾತನಾಡಿ, ಆಯುಷ್ಮಾನ್ ಯೋಜನೆಗೆ ಅನಾರೋಗ್ಯ ಶೀರ್ಷಿಕೆ ವರದಿಯು ರಾಜ್ಯ ಸರ್ಕಾರದ ಕಾರ್ಯವೈಖರಿ ಹಾಗೂ ರೋಗಿಗಳ ಪರಿಸ್ಥಿತಿಗೆ ಕೈಗನ್ನಡಿಯಾಗಿದೆ ಎಂದು ಹರಿಹಾಯ್ದರು. ಆರೋಗ್ಯ ಸೇವೆಗಳನ್ನು ಒದಗಿಸಲು ಕೇಂದ್ರ ಸರ್ಕಾರ ಸಾಕಷ್ಟು ನೆರವು ಒದಗಿಸುತ್ತಿದ್ದರೂ ರಾಜ್ಯ ಸರ್ಕಾರ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಇದರಿಂದಾಗಿ ಬಹಳಷ್ಟು ಆಯುಷ್ ಆಸ್ಪತ್ರೆಗಳಲ್ಲಿ ಒಳ ರೋಗಿಗಳು ದಾಖಲಾಗುತ್ತಿಲ್ಲವೆಂದು ದೂರಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ಹಾವಳಿ: ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಿದ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ಹಾವಳಿಯಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ದೂರಿರುವ ವರದಿಯತ್ತ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಶೂನ್ಯ ವೇಳೆಯಲ್ಲಿ ಗಮನಸೆಳೆದರು. ಭ್ರಷ್ಟಾಚಾರಮುಕ್ತ ಆಡಳಿತ ನೀಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಮೇಲೆ ಪರ್ಸೆಂಟೇಜ್ ವಸೂಲಿಗೆ ಇಳಿದಿರುವುದು ಗಂಭೀರವಾಗಿದೆ. ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಬಹುದೇ ಹೊರತು ಚರ್ಚೆಗೆ ಅವಕಾಶವಿಲ್ಲ ಎಂದು ಕಾಂಗ್ರೆಸ್ನ ಸಲೀಂ ಅಹಮದ್, ಯು.ಬಿ.ವೆಂಕಟೇಶ್ ಇನ್ನಿತರರು ತಗಾದೆ ತೆಗೆದರು. ಆಡಳಿತ ಪಕ್ಷದವರ ಈ ಮಾತಿಗೆ ಬಿಜೆಪಿ ಸದಸ್ಯರು ಒಟ್ಟಾಗಿ ವಿರೋಧಿಸಿದ್ದರಿಂದ ಪರಸ್ಪರ ಮಾತಿನ ಚಕಮಕಿ ನಡೆಯಿತು. ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಧ್ಯೆ ಪ್ರವೇಶಿಸಿ ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶವಿಲ್ಲ. ಬೇರೆ ರೂಪದಲ್ಲಿ ಚರ್ಚೆಗೆ ಅವಕಾಶ ಕೋರಿ ಪತ್ರ ಕೊಡಿ ಎಂದು ತಿಳಿಸಿ, ಕಲಾಪ ಸುಸೂತ್ರಗೊಳಿಸಿದರು.
ಕೋಟಿ ಕೋಟಿ ಲೂಟಿ: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೋಟಿ ಕೋಟಿ ಲೂಟಿ ಶೀರ್ಷಿಕೆಯಡಿ ಪ್ರಕಟಿಸಿದ ವರದಿಯನ್ನು ಬಿಜೆಪಿಯ ಪಿ.ಎಚ್.ಪೂಜಾರ್ ಪ್ರಸ್ತಾಪಿಸಿದರು. ವಾಸಿಸುವ ಮನೆ, ಉಳುವ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲು ನವನಗರ ಯೋಜನೆ ರೂಪಿಸಲಾಯಿತು. ಚಂಡಿಗಢ ಮಾದರಿಯಲ್ಲಿ ನವನಗರ ನಿರ್ವಿುಸಲಾಗುವುದು ಎಂದು ಹೇಳಿದ್ದಷ್ಟೇ ಬಂತು. ನವನಗರ ಯುನಿಟ್ ಎರಡು ಅವ್ಯವಸ್ಥೆಯ ಆಗರವಾಗಿದ್ದು, ಕೋಟಿ ಕೋಟಿ ಹಣವನ್ನು ಅಧಿಕಾರಿಗಳು ನುಂಗಿ ಹಾಕಿದ್ದಾರೆ. ಆದರೆ ಸಂತ್ರಸ್ತರಿಗೊಂದು ನೆಲೆಯಿಲ್ಲದಂತಾಗಿದೆ ಎಂದು ಪಿ.ಎಚ್.ಪೂಜಾರ್ ಕ್ರಮಕ್ಕೆ ಆಗ್ರಹಿಸಿದರು.
20 ಆಸ್ಪತ್ರೆಗಳಿಗೆ ಸಿಬ್ಬಂದಿ ನೇಮಕ: ಆಯುಷ್ಮಾನ್ ಯೋಜನೆಗೆ ಅನಾರೋಗ್ಯದ ಬಗ್ಗೆ ಉತ್ತರ ನೀಡದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, 80 ಆಯುಷ್ ಆಸ್ಪತ್ರೆಗಳ ಪೈಕಿ 55 ಆಸ್ಪತ್ರೆಗಳಲ್ಲಿ ಒಟ್ಟು 5,700 ಒಳ ರೋಗಿಗಳು ದಾಖಲಾಗಿದ್ದಾರೆ. ಐದು ಆಸ್ಪತ್ರೆಗಳಲ್ಲಿ ಈಚೆಗೆ ಒಳ ರೋಗಿಗಳು ದಾಖಲಾಗುತ್ತಿದ್ದು, ಬಾಗಲಕೋಟೆ ಸೇರಿ 20 ಆಯುಷ್ ಆಸ್ಪತ್ರೆಗಳಿಗೆ ಅಗತ್ಯವಿರುವ ಸಿಬ್ಬಂದಿಯನ್ನು ಶೀಘ್ರವೇ ಭರ್ತಿ ಮಾಡಲಾಗುವುದು. ಇಬ್ಬರು ತಜ್ಞ ವೈದ್ಯರ ನೇಮಕಕ್ಕೂ ಕ್ರಮವಹಿಸಲಾಗುವುದು. ಪ್ರತಿ ಆಯುಷ್ ಆಸ್ಪತ್ರೆಗೆ ಕೇಂದ್ರ ಸರ್ಕಾರ 50 ಲಕ್ಷ ರೂ. ನೀಡುತ್ತಿದೆ. ಎರಡು ತಿಂಗಳೊಳಗೆ ಹುದ್ದೆಗಳನ್ನು ತುಂಬಿ 20 ಆಯುಷ್ ಆಸ್ಪತ್ರೆಗಳಲ್ಲಿ ಒಳ ರೋಗಿಗಳ ದಾಖಲು ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.