More

  “ವಿಜಯವಾಣಿ” ವರದಿ ಇಂಪ್ಯಾಕ್ಟ್; ಕೊಬ್ಬರಿ ಅಕ್ರಮ, 6 ಅಧಿಕಾರಿಗಳ ಅಮಾನತು

  ಬೆಂಗಳೂರು: ಬೆಂಬಲ ಬೆಲೆ ಕೊಬ್ಬರಿ ಖರೀದಿಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಖರೀದಿ ಕೇಂದ್ರಗಳ ಆರು ಹಿರಿಯ ಮತ್ತು ಕಿರಿಯ ಸಹಾಯಕರನ್ನು ಸರ್ಕಾರ ಅಮಾನತುಗೊಳಿಸಿದೆ. ‘ಕೊಬ್ಬರಿ ನೋಂದಣಿ ಅಕ್ರಮ’ ಶೀರ್ಷಿಕೆ ಯಲ್ಲಿ ಭಾನುವಾರ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿದ್ದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

  ಲಿಂಗಣ್ಣ ಜಮಖಂಡಿ (ಹಿರಿಯ ಸಹಾಯಕ), ಮೋನೀಶ್ ಗೌಡ (ಕಿರಿಯ ಸಹಾಯಕ), ಮಂಜುನಾಥ ರಾಜೇ ಅರಸ್ (ಹಿರಿಯ ಸಹಾಯಕ), ವೆಂಕಟರೆಡ್ಡಿ ಪಾಟೀಲ್ (ಹಿರಿಯ ಸಹಾಯಕ), ದಿವಾಕರ (ಕಿರಿಯ ಸಹಾಯಕ). ಹುಸೇನ್ ಸಾಬ್ ನದಾಫ್ (ಕಿರಿಯ ಸಹಾಯಕ) ಅಮಾನತುಗೊಂಡವರು. ಖರೀದಿ ಕೇಂದ್ರದಲ್ಲಿ ಅನಧಿಕೃತವಾಗಿ ಉಪಕರಣಗಳನ್ನು ಬಳಕೆ ಮಾಡಿ ಹೆಚ್ಚುವರಿ ನೋಂದಣಿ ಮಾಡಿರುವುದು ತಂತ್ರಾಂಶದಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಇವರ ಮೇಲೆ ಕ್ರಮಕೈಗೊಳ್ಳಲಾಗಿದೆ.

  ಅಕ್ರಮ ನೋಂದಣಿಗೆ ಕಾರಣವಾದವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ನಿರ್ದೇಶನ ನೀಡಿದ ಮೇರೆಗೆ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ವ್ಯವಸ್ಥಾಪಕ ನಿರ್ದೇಶಕರು ಈ ಕ್ರಮ ಕೈಗೊಂಡಿದ್ದಾರೆ. ‘ತೆಂಗು ಬೆಳೆಗಾರರ ಹಿತರಕ್ಷಣೆ ಉದ್ದೇಶದಿಂದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ಮಧ್ಯವರ್ತಿಗಳು ರೈತರ ಹೆಸರಿನಲ್ಲಿ ಖರೀದಿ ಕೇಂದ್ರಗಳ ದುರ್ಬಳಕೆ ಮಾಡಿಕೊಳ್ಳುವುದನ್ನು ಸಹಿಸುವುದಿಲ್ಲ. ಖರೀದಿ ಕೇಂದ್ರಗಳ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಅನಿ ವಾರ್ಯ’ ಎಂದು ಸಚಿವ ಪಾಟೀಲ ಹೇಳಿದ್ದಾರೆ.

  ವಿವಿಧ ಖರೀದಿ ಕೇಂದ್ರಗಳಲ್ಲಿ ಅಕ್ರಮವಾಗಿ ಹೆಚ್ಚುವರಿ ನೋಂದಣಿಯಾಗಿರುವ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಎಲ್ಲ ಖರೀದಿ ಕೇಂದ್ರಗಳಲ್ಲಿನ ನೋಂದಣಿಯ ವಿವರ ಒದಗಿಸಲು ಸಚಿವರು ನಿರ್ದೇಶನ ನೀಡಿದ್ದು, ಯೂಸರ್ ಐಡಿ ಮತ್ತು ಪಾಸ್​ವರ್ಡ್ ದುರ್ಬಳಕೆ ಮಾಡಿಕೊಳ್ಳಲು ಅವಕಾಶವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಎರಡು ದಿನಗಳ ಹಿಂದೆ ನಡೆದ ಕೃಷಿ ಮಾರುಕಟ್ಟೆ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲೂ ಹೆಚ್ಚುವರಿ ನೋಂದಣಿ ಬಗ್ಗೆ ರ್ಚಚಿಸಿದ್ದ ಸಚಿವರು, ರೈತರನ್ನು ವಂಚಿಸುವ ದಲ್ಲಾಳಿಗಳ ಬಗ್ಗೆ ಎಚ್ಚರ ವಹಿಸಬೇಕು. ಖರೀದಿ ಕೇಂದ್ರಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದ್ದರು.

  ಹೆಚ್ಚುವರಿ ಖರೀದಿಗೆ ಕೇಂದ್ರಕ್ಕೆ ಪತ್ರ: ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಪ್ರಮಾಣ ಹೆಚ್ಚಳ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ. ರಾಜ್ಯದಲ್ಲಿ 2.5 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಇಳುವರಿ ಅಂದಾಜು ಇದ್ದು, ಈಗ 62,500 ಮೆಟ್ರಿಕ್ ಟನ್ ಕೊಬ್ಬರಿ ಖರೀದಿಗೆ ಅನುಮತಿ ನೀಡಲಾಗಿದೆ. ಖರೀದಿ ಕೇಂದ್ರಗಳಲ್ಲಿ ರೈತರು ಅಧಿಕ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ನಿಗದಿಪಡಿಸಿರುವ ಖರೀದಿ ಪ್ರಮಾಣದಷ್ಟು ನೋಂದಣಿಯಾಗಿದೆ. ಬಹುತೇಕ ಕಡೆ ಖರೀದಿ ಪ್ರಮಾಣ ಹೆಚ್ಚಳ ಮಾಡಬೇಕು ಎಂಬ ಒತ್ತಡ ಇದೆ. ಇಳುವರಿ ಪ್ರಮಾಣ ಗಮನಿಸಿದರೆ ಖರೀದಿ ಪ್ರಮಾಣ ಹೆಚ್ಚಿಸುವುದು ಅನಿವಾರ್ಯ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಬೆಂಬಲ ಬೆಲೆ ಕೊಬ್ಬರಿ ಖರೀದಿ ಕೇಂದ್ರದ ಉದ್ದೇಶ ಸಫಲವಾಗಬೇಕಾದರೆ ಇನ್ನೂ ಶೇ. 25ರಷ್ಟು ಖರೀದಿ ಪ್ರಮಾಣ ಹೆಚ್ಚಳ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts