

ಬೆಂಗಳೂರು: ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ವಿವಿಧ ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿದ ಉಪಲೋಕಾಯುಕ್ತ, ನ್ಯಾಯಮೂರ್ತಿ ಬಿ.ವೀರಪ್ಪ ಅವರು ಸ್ವಯಂಪ್ರೇರಿತ 27 ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೆ.24 ಮತ್ತು 25ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸರ್ಕಾರಿ ಕಚೇರಿಗಳ ಕಾರ್ಯವೈಖರಿ, ಸಾರ್ವಜನಿಕ ಸೇವೆಗಳ ಗುಣಮಟ್ಟ, ಮೂಲಸೌಕರ್ಯಗಳ ಸ್ಥಿತಿ ಹಾಗೂ ಅಧಿಕಾರಿಗಳ ಕರ್ತವ್ಯ ನಿರ್ವಹಣೆ ಪರಿಶೀಲಿಸಿದಾಗ ಹಲವು ಗಂಭೀರ ಲೋಪದೋಷಗಳು ಬೆಳಕಿಗೆ ಬಂದಿವೆ. ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಔಷಧಿಗಳ ಕೊರತೆ, ವಿದ್ಯಾರ್ಥಿ ನಿಲಯಗಳಲ್ಲಿ ಮೂಲ ಸೌಕರ್ಯ ಕೊರತೆ, ಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿಸದಿರುವ ಆರೋಪ, ತೆರಿಗೆ ವಸೂಲಿಯಲ್ಲಿ ಹಿನ್ನಡೆ, ಭೂಸ್ವಾಧೀನ ಪರಿಹಾರ ಪಾವತಿಯಲ್ಲಿ ವಿಳಂಬ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಕುರಿತು ಹಲವು ಸಮಸ್ಯೆಗಳು ಕಂಡು ಬಂದಿವೆ.
ಚಿಕ್ಕೋಡಿಯ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯ ಪರಿಶೀಲನೆಯಲ್ಲಿ ಮಹಿಳಾ ಸ್ತ್ರೀರೋಗ ತಜ್ಞರು ಹಾಗೂ ರೇಡಿಯಾಲಜಿಸ್ಟ್‌ಗಳು ಕಳೆದ 7 ತಿಂಗಳಿನಿಂದ ಲಭ್ಯವಿಲ್ಲದಿರುವುದು ಗಮನಕ್ಕೆ ಬಂದಿದೆ ಉಪಲೋಕಾಯುಕ್ತರು ತಿಳಿಸಿದ್ದಾರೆ.
ಔಷಧಾಲಯ ಪರಿಶೀಲನೆ ವೇಳೆ ಡಿಜಿಪಾಮ್ ಔಷಧಿಯ ಅವಧಿ 2025ರ ಜುಲೈ ತಿಂಗಳಲ್ಲಿಯೇ ಮುಕ್ತಾಯವಾಗಿರುವುದು ಪತ್ತೆಯಾಗಿದೆ. ಬಸ್ ನಿಲ್ದಾಣದ ಸ್ಟಾಲ್ ಸಂಖ್ಯೆ 11ರಲ್ಲಿ ವ್ಯಾಪಾರ ಪರವಾನಗಿ ಪ್ರದರ್ಶಿಸಿಲ್ಲ. ದುರ್ಗಾ ಹೋಟೆಲ್‌ನಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿರುವ ಮಹಾದೇವಮ್ಮ ಅವರಿಗೆ ದಿನಕ್ಕೆ 300ರಂತೆ ತಿಂಗಳಿಗೆ 9,000 ವೇತನ ನೀಡಲಾಗುತ್ತಿದೆ ಬೆಳಕಿಗೆ ಬಂದಿದೆ. ಆದರೆ, ಕನಿಷ್ಠ ವೇತನ 18,000 ಎಂದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.
ಚಿಕ್ಕೋಡಿ ಪುರಸಭೆಯಲ್ಲಿಯೂ ಹಲವು ಲೋಪದೋಷಗಳು ಹಾಗೂ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಯ ಹಣಕಾಸು ವಹಿವಾಟಿನ ಕುರಿತು ಗಂಭೀರ ಆಕ್ಷೇಪಗಳು ವ್ಯಕ್ತವಾಗಿವೆ. ರಾಜೇಶ್ ಎಂಬುವವರ ವೇತನ 2.96 ಲಕ್ಷ ಎಂದು ದಾಖಲೆಯಲ್ಲಿ ಉಲ್ಲೇಖಿಸಲಾಗಿದ್ದು, ಅವರ ಯುಪಿಐ ವಹಿವಾಟು ವಾರ್ಷಿಕ 7,06,287 ಎಂದು ತಿಳಿಸಲಾಗಿದೆ.
ತಾಲೂಕು ಖಜಾನೆ ಕಚೇರಿಯಲ್ಲಿ ಹಣಕಾಸು ವಹಿವಾಟಿನ ಕುರಿತು ವಿಭಿನ್ನ ಮೊತ್ತಗಳನ್ನು ಉಲ್ಲೇಖಿಸಲಾಗಿದೆ. ಆರಂಭದಲ್ಲಿ ತಿಂಗಳಿಗೆ 2 ಕೋಟಿ ವಹಿವಾಟು ನಡೆಯುತ್ತದೆ ಎಂದು ತಿಳಿಸಲಾಗಿದ್ದು, ನಂತರ 200 ಕೋಟಿ ಎಂದು ಮಾಹಿತಿ ನೀಡಿರುವ ಬಗ್ಗೆ ಉಪಲೋಕಾಯುಕ್ತರು ಪರಿಶೀಲನೆ ನಡೆಸಿದರು. ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ವಿವಿಧ ಸೇವೆಗಳಿಗೆ ಸಂಬಂಧಿಸಿದ ಅರ್ಜಿಗಳು ಬಾಕಿ ಉಳಿದಿವೆ. ಸರ್ವೆಗಾಗಿ 1,868 ಅರ್ಜಿಗಳು, ತತ್ಕಾಲ್ ಪೋಡಿಗಾಗಿ 525, ಹದು ್ದಬಸ್ತಿನ 448, ಪೋಡಿಗೆ 138, ಇ-ಸರ್ವೆಗೆ 337 ಹಾಗೂ ಪಿ.ಎಂ.ಜಿ. ಅಡಿಯಲ್ಲಿ 349 ಅರ್ಜಿಗಳು ಬಾಕಿ ಉಳಿದಿರುವುದು ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ 74 ಪ್ರಕರಣಗಳು ಬಾಕಿ ಉಳಿದಿವೆ. ಪ್ಯಾಕೇಜ್-3ರ ಅಡಿಯಲ್ಲಿ 522 ರೈತರಿಗೆ ಭೂಸ್ವಾಧೀನ ಪರಿಹಾರವಾಗಿ 61 ಕೋಟಿ ಪಾವತಿಸಬೇಕಿದೆ ಎಂದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಪರಿಹಾರ ಪಾವತಿಯಲ್ಲಿ ವಿಳಂಬವಾದರೆ ರೈತರು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಬಾಕಿ ವೇತನ ಪಾವತಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೀಗೆ ಚಿಕ್ಕೋಡಿ ತಾಲೂಕಿನ ಕಾರ್ಮಿಕ ಇಲಾಖೆ, ತಾಲ್ಲೂಕು ಪಂಚಾಯಿತಿಯಿಂದ 18.5 ಕೋಟಿ ತೆರಿಗೆ ಬಾಕಿ, ಗ್ರಾಮೀಣ ಅಭಿವೃದ್ಧಿ ಕಾಮಗಾರಿ ವೇಳೆ ಕುರೇಶಿ ಗ್ರಾಮದಲ್ಲಿ ಯಾವುದೇ ಕಾಮಗಾರಿ ನಡೆಸದೆ 2 ಕೋಟಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಶಿಕ್ಷಣ ಇಲಾಖೆ, ವಸತಿ ನಿಲಯಗಳಲ್ಲಿ ಅವ್ಯವಸ್ಥೆಗಳು ಕಂಡು ಬಂದಿರುವ ಪರಿಣಾಮ 27 ಸುಮೋಟೊ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಉಪಲೋಕಾಯುಕ್ತ, ನ್ಯಾಯಮೂರ್ತಿ ಬಿ.ವೀರಪ್ಪ ಅವರು ತಿಳಿಸಿದ್ದಾರೆ.