ಸಂಪಾದಕೀಯ: ಅಭಿವೃದ್ಧಿಯೇ ಆದ್ಯತೆಯಾಗಲಿ

ಅಭಿವೃದ್ಧಿಯೇ ಆದ್ಯತೆಯಾಗಲಿ
ಅಭಿವೃದ್ಧಿಯೇ ಆದ್ಯತೆಯಾಗಲಿ
Published on

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸೋಮವಾರ ಸಂಪುಟ ವಿಸ್ತರಣೆಯಾಗಿದೆ. ಈ ಮೂಲಕ ಬಹುನಿರೀಕ್ಷಿತ ಸಚಿವಸಂಪುಟ ವಿಸ್ತರಣೆಯ ಕಸರತ್ತು ಪೂರ್ಣಗೊಂಡಿದ್ದು, 19 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಒಂದು ಸ್ಥಾನ ಮಾತ್ರ ಖಾಲಿ ಉಳಿದಿದೆ. ರಾಜಕೀಯ ಲೆಕ್ಕಾಚಾರ, ಪ್ರಾದೇಶಿಕ ಪ್ರಾತಿನಿಧ್ಯ ಎಲ್ಲವನ್ನೂ ಪರಿಗಣಿಸಿ ಮಂತ್ರಿಮಂಡಲ ರಚನೆಯಾಗಿದೆ. ರಾಜಕೀಯ ಅನುಭವ, ಕಾರ್ಯದಕ್ಷತೆ ಹೀಗೆ ಹಲವು ಮಾನದಂಡ ಅನುಸರಿಸಲಾಗಿದೆ. ಕೆಲ ಹೊಸಬರಿಗೂ ಅವಕಾಶ ಸಿಕ್ಕಿದೆ. 

ಈ ನಡುವೆ, ಸಚಿವ ಸ್ಥಾನದಿಂದ ವಂಚಿತರಾದ ಕೆಲ ಶಾಸಕರು ಬಹಿರಂಗ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. 

ರಾಜಕೀಯದಲ್ಲಿ ಇದೆಲ್ಲವೂ ಸಾಮಾನ್ಯ. ಅದೇನೇ ಇದ್ದರೂ, ಡಿ.ಕೆ.ಶಿವಕುಮಾರ್ ಅವರ ತಂಡ ಸಿದ್ಧಗೊಂಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮಹತ್ವದ ಸಂದೇಶ ನೀಡಿದ್ದು, ‘ಸುಭದ್ರ, ಜನಪರ ಹಾಗೂ ಪ್ರಗತಿಪರ ಆಡಳಿತದೊಂದಿಗೆ ಕರುನಾಡನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸೋಣ’ ಎಂದು ನೂತನ ಸಚಿವರಿಗೆ ಕರೆ ನೀಡಿದ್ದಾರೆ. ‘ಪಾರದರ್ಶಕ, ದಕ್ಷ ಹಾಗೂ ಉತ್ತಮ ಆಡಳಿತ ನೀಡುವ ಮೂಲಕ ರಾಜ್ಯದ ಜನರ ಆಶೋತ್ತರಗಳಿಗೆ ನಾವು ಸ್ಪಂದಿಸಬೇಕಾಗಿದೆ’ ಎಂದು ಶಿವಕುಮಾರ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, ಈ ಮೂಲಕ ವಿಶ್ವಾಸದ ಹೆಜ್ಜೆಯನ್ನು ಇರಿಸಿದ್ದಾರೆ.


ಪ್ರಸಕ್ತ ವಿಧಾನಸಭೆಯ ಅವಧಿಯಲ್ಲಿ ಈ ನೂತನ ಸಂಪುಟಕ್ಕೆ ಉಳಿದಿರುವುದು ಎರಡು ವರ್ಷಕ್ಕಿಂತಲೂ ಕಡಿಮೆ ಅವಧಿ. ಈ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಿದೆ. ಎಲ್ಲ ಭಾಗಗಳಿಗೂ ಆದ್ಯತೆ ದೊರೆತು, ಪ್ರಾದೇಶಿಕ ಅಸಮತೋಲನ ನಿವಾರಣೆಯಾಗಬೇಕಿದೆ. ಇಲಾಖೆಗಳಿಗೆ ಸಂಬಂಧಪಟ್ಟ ಮಂತ್ರಿಗಳೇ ಇಲ್ಲದ್ದರಿಂದ ಕಳೆದ ಎರಡು ತಿಂಗಳಿಂದ ಕೆಲಸಗಳು ಆಮೆಗತಿಯಲ್ಲಿ ಸಾಗುತ್ತಿದ್ದವು. ರಾಜ್ಯದ ಕೆಲ ಭಾಗದಲ್ಲಿ ಬರದ ಸ್ಥಿತಿ ಇದ್ದರೆ, ಮಲೆನಾಡು ಪ್ರದೇಶದಲ್ಲಿ ಮಳೆ ಸಂಬಂಧಿತ ಅನಾಹುತಗಳು ಸಂಭವಿಸಿವೆ. ರೈತರು ಮುಂದೇನು ಎಂದು ದಿಕ್ಕುಕಾಣದೆ ಚಿಂತಾಕ್ರಾಂತರಾಗಿದ್ದಾರೆ. ಬೆಳೆವಿಮೆಯ ಕುರಿತು ರೈತರಲ್ಲಿ ಅರಿವು ಮೂಡಿಸಬೇಕಿದೆ ಮತ್ತು ಮುಂಗಾರು ವಿಫಲವಾಗಿರುವುದರಿಂದ ಪರ್ಯಾಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಿ, ರೈತರಲ್ಲಿ ಆತ್ಮಸ್ಥೈರ್ಯ ತುಂಬಬೇಕಿದೆ.
ಸಮಸ್ಯೆಗಳನ್ನು ಆಲಿಸಲು ಮತ್ತು ಬೇಡಿಕೆಗಳನ್ನು ಈಡೇರಿಸಲು ಪ್ರತ್ಯೇಕ ‘ಸಾರ್ವಜನಿಕರ ಕುಂದುಕೊರತೆ ಸಚಿವಾಲಯ’ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿಗಳು ಈ ಹಿಂದೆಯೇ ಘೋಷಿಸಿದ್ದಾರೆ. ಈ ಯೋಜನೆ ಯಶಸ್ವಿಯಾಗಬೇಕಾದರೆ ಮತ್ತು ಜನರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಈ ನಿಟ್ಟಿನಲ್ಲಿ ಸಚಿವರ ಸಹಭಾಗಿತ್ವ ಮತ್ತು ಇಚ್ಛಾಶಕ್ತಿ ಅಗತ್ಯ. ಸಾಮಾನ್ಯ ಕೆಲಸಗಳಿಗಾಗಿಯೂ ಜನರು ತಾಲೂಕು ಹಾಗೂ ಜಿಲ್ಲಾ ಕಚೇರಿಗಳಿಗೆ ಪದೇಪದೆ ಅಲೆದಾಡಬೇಕಾದ ಸ್ಥಿತಿ ಇದೆ. 

ವಿಧಾನಸಭಾ ಕ್ಷೇತ್ರಗಳಿಗೆ ಬಿಡುಗಡೆಯಾಗುತ್ತಿರುವ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳು ಕಾನೂನಾತ್ಮಕ ಮತ್ತು ತಾಂತ್ರಿಕ ಪೇಚಿನಲ್ಲಿ ಸಿಲುಕಿಕೊಂಡಿವೆ. ರಾಜಧಾನಿ ಬೆಂಗಳೂರಿನ ಬಹುತೇಕ ರಸ್ತೆಗಳು ದುಸ್ಥಿತಿಯಲ್ಲಿದ್ದು, ಸಂಚಾರಸಿಕ್ಕು ಸಮಸ್ಯೆ ಇನ್ನಷ್ಟು ಉಲ್ಬಣಿಸಿದೆ. ಹೀಗಾಗಿ ನೂತನ ಸಚಿವರು ವೇಗವಾಗಿ ಕೆಲಸ ಮಾಡುವುದು ಅಗತ್ಯವಾಗಿದೆ. ಮುಖ್ಯವಾಗಿ, ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರವನ್ನು ಬದಿಗಿಟ್ಟು, ಜನರ ಆಶೋತ್ತರಗಳಿಗೆ ಸ್ಪಂದಿಸುವುದು ನೂತನ ಸಂಪುಟದ ಆದ್ಯತೆಯಾಗಲಿ. ಈ ಸಂಪುಟವು ಆಡಳಿತದಲ್ಲಿ ಹೊಸತನ ಮತ್ತು ಉತ್ಸಾಹವನ್ನು ತರಲಿ. ರಾಜ್ಯದ ಆಡಳಿತಯಂತ್ರ ಚುರುಕುಗೊಳ್ಳಲಿ ಎಂಬುದು ಜನರ ಸದಾಶಯ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net