ಹಾವು ಕಂಡ ಕೂಡಲೇ ಈ ಮಿಸ್ಟೇಕ್​ಗಳನ್ನು ಎಂದಿಗೂ ಮಾಡ್ಬೇಡಿ! ಸ್ವಲ್ಪ ಯಾಮಾರಿದ್ರೂ ಪ್ರಾಣವೇ ಹೋಗುತ್ತೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಬೇಸಿಗೆ ಸಮಯದಲ್ಲಿ ಹಾವುಗಳ ಸಂಚಾರ ಹೆಚ್ಚು
  • ಹಾವು ಕಂಡ ಕೂಡಲೇ ಈ ಮಿಸ್ಟೇಕ್​ಗಳನ್ನು ಮಾಡ್ಬೇಡಿ
Snakes: ಪ್ರಸ್ತುತ ಬೇಸಿಗೆಗಾಲ ಆಗಿರುವುದರಿಂದ ಹವಾಮಾನ ಬದಲಾವಣೆಯು ಹಾವುಗಳ ಮೇಲೆ ದೊಡ್ಡ ಪರಿಣಾಮ ಬೀರಿದೆ. ಸಾಮಾನ್ಯವಾಗಿ, ಹಾವುಗಳು ಅಕ್ಟೋಬರ್ ಹಾಗೂ ನವೆಂಬರ್‌ ತಿಂಗಳುಗಳಲ್ಲಿ ಮಿಲನ ಕ್ರಿಯೆ ನಡೆಸುತ್ತವೆ. ಫೆಬ್ರವರಿಯಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಆದರೆ, ಈಗ ಈ ಪ್ರಕ್ರಿಯೆಯಲ್ಲಿ ಕೊಂಚ ಬದಲಾವಣೆ ಕಂಡುಬಂದಿದೆ. ಅದೇನೆಂದರೆ, ಹಾವುಗಳು ಇದೀಗ ಫೆಬ್ರವರಿಯವರೆಗೆ ಮಿಲನ ಕ್ರಿಯೆ ನಡೆಸುತ್ತವೆ ಮತ್ತು ಏಪ್ರಿಲ್‌ನಲ್ಲಿ ಮೊಟ್ಟೆಗಳನ್ನಿಟ್ಟು ಮರಿಗಳಿಗೆ ಜನ್ಮ ನೀಡುತ್ತವೆ ಎಂದು ತಜ್ಞರು ಹೇಳಿದ್ದಾರೆ. 
ಮೊಟ್ಟೆಗಳನ್ನು ಇಟ್ಟು ಮರಿ ಮಾಡಲು ಬೆಚ್ಚಗಿನ ಪ್ರದೇಶಗಳನ್ನು ಹುಡುಕುತ್ತವೆ. ಹೀಗಾಗಿ, ಹಾವುಗಳು ಕೊಟ್ಟಿಗೆಗಳು, ಸೌದೆಗಳ ರಾಶಿ, ಜೋಡಿಸಿದ ಕಲ್ಲುಗಳು, ಬಟ್ಟೆ ಮತ್ತು ಕಸದ ರಾಶಿಗಳಲ್ಲಿ ಇರಲು ಬಯಸುತ್ತವೆ. ಮುಸ್ಸಂಜೆ, ರಾತ್ರಿ ಮತ್ತು ಮುಂಜಾನೆ ಸಮಯದಲ್ಲಿ ಹಾವುಗಳ ಬಗ್ಗೆ ಹೆಚ್ಚಿನ ಜಾಗರೂಕತೆ ಅಗತ್ಯ, ಏಕೆಂದರೆ, ಕೆಲವೊಮ್ಮೆ ಬಿಸಿಲು ಕಾಯಿಸಿಕೊಳ್ಳಲು ಹೊರಬರುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಬೇಸಿಗೆಯಲ್ಲಿ ಮಕ್ಕಳು ಹೊರಗಡೆ ಆಡುವುದರಿಂದ ಹಾವು ಕಡಿತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. 
ಬೇಸಿಗೆಯಲ್ಲಿ ತಾಪಮಾನ ಹೆಚ್ಚಿರುವ ಕಾರಣ, ಹಾವುಗಳು ತಂಪಾದ ಸ್ಥಳವನ್ನು ಅರಸಿ ಬರುತ್ತವೆ. ಅವು ಹೆಚ್ಚಾಗಿ ಆಹಾರ, ನೀರು ಅಥವಾ ಆಶ್ರಯಕ್ಕಾಗಿ ಮನೆಗಳು ಅಥವಾ ಮರದ ಪೊಟರೆಗಳನ್ನು ಪ್ರವೇಶಿಸುತ್ತವೆ. ಮನೆಯೊಳಗೆ ಹಾವು ಕಂಡರೆ ಎಂಥವರ ಎದೆ ಝುಲ್​ ಎನ್ನುತ್ತದೆ. ಅಸಲಿಗೆ, ಮನುಷ್ಯನ ಈ ಭಯವು ಪರಿಸ್ಥಿತಿಯನ್ನು ಹದಗೆಡಿಸುತ್ತದೆ. ಆತಂಕದಲ್ಲಿ ಸುಮ್ಮನೆ ಹೋಗುವ ಹಾವನ್ನು ಕಚ್ಚುವಂತೆ ಮಾಡುತ್ತಾನೆ. ಉರಗವನ್ನು ಕಂಡಾಗ ಎಂದಿಗೂ ಈ ಮಿಸ್ಟೇಕ್​ಗಳನ್ನು ಮಾಡಬೇಡಿ. 

ಹಾವನ್ನು ಕಂಡಾಗ ಮೊದಲು ಏನು ಮಾಡಬೇಕು?

ನೀವು ಹಾವನ್ನು ಕಂಡರೆ, ಅದರ ಹತ್ತಿರ ಹೋಗಲೇಬೇಡಿ. ಸುರಕ್ಷಿತವಾಗಿ ದೂರದಲ್ಲಿರಿ ಮತ್ತು ಶಾಂತವಾಗಿರಲು ಪ್ರಯತ್ನಿಸಿ. ಹಠಾತ್ ಚಲನೆ ಅಥವಾ ಜೋರಾದ ಕೂಗುಗಳನ್ನು ಆದಷ್ಟು ತಪ್ಪಿಸಿ. ಹಾವುಗಳು ಸಾಮಾನ್ಯವಾಗಿ ಸುಖಾಸುಮ್ಮನೆ ದಾಳಿ ಮಾಡುವುದಿಲ್ಲ. ಅವುಗಳು ತಮಗೆ ಬೆದರಿಕೆಯಿದೆ ಎಂದು ಅನಿಸಿದರೆ ಮಾತ್ರ ದಾಳಿ ಮಾಡುತ್ತವೆ. ಸಾಮಾನ್ಯವಾಗಿ ಮನುಷ್ಯರನ್ನು ಕಂಡಾಗ ತಕ್ಷಣವೇ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ. ಹೀಗಾಗಿ, ಯಾವಾಗಲೂ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಒಳ್ಳೆಯದು.

ಹಾವನ್ನು ಹಿಡಿಯಲು ಅಥವಾ ಹೊಡೆಯಬೇಡಿ

ಅನೇಕ ಜನರು ಭಯದಿಂದ ಹಾವುಗಳನ್ನು ಹೊಡೆಯಲು, ಕೊಲ್ಲಲು ಪ್ರಯತ್ನಿಸುತ್ತಾರೆ. ಇದು ದೊಡ್ಡ ತಪ್ಪು. ನೀವು ಹಾವುಗಳ ಹತ್ತಿರ ಹೋದರೆ, ಅವು ತಮ್ಮ ಆತ್ಮರಕ್ಷಣೆಗಾಗಿ ಕಚ್ಚುತ್ತವೆ. ಹಾವುಗಳ ಬಗ್ಗೆ ಹಿಂದೆ-ಮುಂದೆ ತಿಳಿಯದೆ ಅವುಗಳನ್ನು ಮುಟ್ಟುವುದು ಅಥವಾ ಹಿಡಿಯಲು ಮುಂದಾಗುವುದು ಅತ್ಯಂತ ಅಪಾಯಕಾರಿ. ಹಾವನ್ನು ನೋಡಿ ಅದು ವಿಷಕಾರಿಯೋ ಅಲ್ಲವೋ ಎಂದು ತಿಳಿಯುವುದು ಕಷ್ಟಸಾಧ್ಯ. ಹೀಗಾಗಿ, ಉರಗ ತಜ್ಞರ ಸಹಾಯ ಪಡೆಯುವುದು ಅಥವಾ ಸಂಪರ್ಕಿಸುವುದು ಉತ್ತಮ ಸಲಹೆ.  
ಯಾವಾಗಲೂ ವೃತ್ತಿಪರ ಉರಗ ತಜ್ಞರನ್ನು ಹಾವು ಕಂಡಾಗ ಸಂಪರ್ಕಿಸಿ. ಅಂತಹ ಸಂದರ್ಭಗಳಲ್ಲಿ ಏನು ಮಾಡಬೇಕೆಂದು ಅವರಿಗೆ ಸ್ಪಷ್ಟವಾಗಿ ಗೊತ್ತಿರುತ್ತದೆ. ಸ್ಥಳೀಯ ಸ್ನೇಕ್​ ರೆಸ್​ಕ್ಯೂವರ್ಸ್​​ಗಳು ಹಾವಿಗೆ ನೋವು ಅಥವಾ ಸಮಸ್ಯೆ ಆಗದಂತೆ ಸುರಕ್ಷಿತವಾಗಿ ಅವುಗಳನ್ನು ಹಿಡಿದು, ಕಾಡಿಗೆ ಬಿಡುತ್ತಾರೆ. ಹೀಗಾಗಿ, ಹಾವುಗಳನ್ನು ಕಂಡಾಗ ಆದಷ್ಟು ದೂರವಿರಿ ಮತ್ತು ಆ ಜೀವಿಗಳನ್ನು ಹೊಡೆಯುಬುದು ಅಥವಾ ಕೊಲ್ಲುವುದು ಮಾಡಬೇಡಿ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net