

ಪದವೀಧರರಾಗಿರುವ ಒಲಿಂಪಿಕ್ಸ್ ಹಾಗೂ ಪ್ಯಾರಾಒಲಿಂಪಿಕ್ಸ್ ಪದಕ ವಿಜೇತರಿಗೆ ಗ್ರೂಪ್ ಎ; ಪದವೀಧರರಾಗಿರುವ ಏಷ್ಯನ್ ಗೇಮ್ಸ್ ಹಾಗೂ ಕಾಮನ್ ವೆಲ್ತ್ ಪದಕ ವಿಜೇತರಿಗೆ ಗ್ರೂಪ್ ಬಿ ಉದ್ಯೋಗ; ಇದಕ್ಕಿಂತ ಕಡಿಮೆ ಸ್ತರದ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದವರಿಗೆ ಗ್ರೂಪ್ ಸಿ ಹಾಗೂ ಗ್ರೂಪ್ ಡಿ ಉದ್ಯೋಗ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿರುವುದು ಕ್ರೀಡೆಗಳಿಗೆ ಪ್ರೋತ್ಸಾಹದಾಯಕ ಸ್ವಾಗತಾರ್ಹ ಕ್ರಮವಾಗಿದೆ. ಕ್ರೀಡಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಸಾಂರ್ದಭಿಕವಾಗಿ ಈ ಹೇಳಿಕೆ ನೀಡಿದ್ದರೂ ‘ಕ್ರೀಡಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳ ನೇತೃತ್ವದ ಆಯ್ಕೆ ಸಮಿತಿ ಮೂಲಕ ಕ್ರೀಡಾಪಟುಗಳನ್ನು ನೇರ ನೇಮಕ ಮಾಡಿ ಸರ್ಕಾರಿ ಉದ್ಯೋಗ ನೀಡುವ ಯೋಜನೆಗೆ ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಾಗುವುದು’ ಎಂದೂ ಹೇಳಿರುವುದರಿಂದ ಶೀಘ್ರದಲ್ಲಿಯೇ ಇದು ಅನುಷ್ಠಾನಕ್ಕೆ ಬರಬಹುದು ಎಂದು ನಿರೀಕ್ಷಿಸಬಹುದಾಗಿದೆ.
ಪದವೀಧರಲ್ಲದ ಪದಕ ವಿಜೇತರಿಗೆ ಉದ್ಯೋಗ ನೀಡಲಾಗುವುದೋ ಇಲ್ಲವೋ ಹಾಗೂ ಕೆಳಸ್ತರದ ಕ್ರೀಡಾಕೂಟಗಳು ಎಂದರೆ ಯಾವುವು ಎಂಬ ಸಂಗತಿಗಳನ್ನು ಈ ಯೋಜನೆಗೆ ಅಂತಿಮ ರೂಪ ನೀಡುವ ಸಂದರ್ಭದಲ್ಲಿ ಸ್ಪಷ್ಟಪಡಿಸಬೇಕಾದ ಅಗತ್ಯ ಇದೆ. ಪೊಲೀಸ್ ಹಾಗೂ ಅರಣ್ಯ ಇಲಾಖೆ ಸೇರಿದಂತೆ ಗೃಹ ಇಲಾಖೆಯ ಉದ್ಯೋಗಗಳಲ್ಲಿ ಶೇ. 2 ಮೀಸಲಾತಿಯನ್ನು ಕರ್ನಾಟಕ ಸರ್ಕಾರ ಈಗಾಗಲೇ ಕ್ರೀಡಾಪಟುಗಳಿಗೆ ಒದಗಿಸುತ್ತಿದೆ. ಈ ಮೀಸಲಾತಿಯನ್ನು ರಾಜ್ಯದ ಎಲ್ಲ ಇಲಾಖೆಗಳಿಗೆ ವಿಸ್ತರಿಸುವುದಾಗಿ ಬೊಮ್ಮಾಯಿ ಕಳೆದ ಆಗಸ್ಟ್ನಲ್ಲೇ ಪ್ರಕಟಿಸಿದ್ದು ಅದು ಜಾರಿಗೆ ಬರುವುದು ಬಾಕಿ ಇದೆ.
ಕಳೆದ ಆಗಸ್ಟ್ 15ರಂದು ಅಮೃತ ಕ್ರೀಡಾ ದತ್ತು ಯೋಜನೆಯಡಿ 75 ಕ್ರೀಡಾಪಟುಗಳನ್ನು ದತ್ತು ಪಡೆದು, ಮುಂದಿನ ಪ್ಯಾರೀಸ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ತರಬೇತಿ ನೀಡಲಾಗುತ್ತಿದೆ. ಇಂತಹ ಯೋಜನೆ ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಮಕ್ಕಳು ಕ್ರೀಡೆಯತ್ತ ಆಸಕ್ತಿ ತೋರಿದರೂ ಬಹುತೇಕ ಪೋಷಕರು ಅದಕ್ಕೆ ಪ್ರೋತ್ಸಾಹ ನೀಡುವಂತಹ ವಾತಾವರಣ ಭಾರತದಲ್ಲಿ ಕಂಡುಬರುವುದಿಲ್ಲ. ಆಟಗಳಲ್ಲಿ ಸಮಯ ವ್ಯರ್ಥ ಮಾಡುವ ಬದಲು ಓದಿನತ್ತ ಗಮನ ನೀಡಿದರೆ ಉತ್ತಮ ಉದ್ಯೋಗ ಪಡೆಯಲು, ಜೀವನ ರೂಪಿಸಿಕೊಳ್ಳಲು ಅನುವಾಗುತ್ತದೆ ಎಂಬ ಧೋರಣೆ ಗೋಚರಿಸುತ್ತದೆ.
ಹೀಗಾಗಿ, ಕ್ರೀಡಾ ಮೀಸಲಾತಿ ಒದಗಿಸುವುದು ಇಂತಹ ಮನಸ್ಥಿತಿಯನ್ನು ತಕ್ಕಮಟ್ಟಿಗೆ ಬದಲಿಸಲು ಅನುಕೂಲವಾಗಹುದಾಗಿದೆ. ಶಾಲೆಗಳಲ್ಲೇ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುವುದು ಬಹುಮುಖ್ಯ. ರಾಜ್ಯದಲ್ಲಿನ ಬಹುತೇಕ ಶಾಲೆಗಳಲ್ಲಿ ಮಕ್ಕಳು ಆಟವಾಡಲು ಸೂಕ್ತ ಕ್ರೀಡಾಂಗಣ ಇಲ್ಲ ಎಂಬುದು ವಾಸ್ತವ ಸಂಗತಿಯಾಗಿದೆ. ಶಾಲಾ- ಕಾಲೇಜುಗಳಲ್ಲಿ ಕ್ರೀಡಾಂಗಣ ಕಡ್ಡಾಯ ಎಂಬ ನಿಯಮ ಇದ್ದರೂ ಇಕ್ಕಟ್ಟಾದ ಕಟ್ಟಡಗಳಲ್ಲೇ ವಿದ್ಯಾಲಯಗಳು ತಲೆಎತ್ತುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಮಕ್ಕಳಿಗೆ ಆಟವಾಡಲು ಪ್ರೋತ್ಸಾಹ ನೀಡಿದರೆ ಅವರು ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ಗಟ್ಟಿಯಾಗುತ್ತಾರೆ. ಪಾಠದ ಜೊತೆಗೆ ಆಟವೂ ಇದ್ದರೆ ಮಕ್ಕಳು ಖುಷಿಖುಷಿಯಿಂದಲೇ ಶಾಲೆಗೆ ಹೋಗುವ ಸಕಾರಾತ್ಮಕ ವಾತಾವರಣ ನಿರ್ವಣವಾಗುತ್ತದೆ. ಇಂತಹ ಸಂಗತಿಗಳತ್ತ ಗಮನ ಹರಿಸಿ ಸರ್ಕಾರ ಕ್ರಮ ಕೈಗೊಂಡರೆ ಸದೃಢ ಸಮಾಜ ನಿರ್ವಣವೂ ಸಾಧ್ಯವಾಗುತ್ತದೆ.