ಗೋಳಾಗದಿರಲಿ ಗೀಳು: ಮಕ್ಕಳಲ್ಲಿ ಹೆಚ್ಚಿದ ಮೊಬೈಲ್ ವ್ಯಸನ

Editorial
Published on

ಜಗತ್ತಿನ ಅದ್ಭುತ ಆವಿಷ್ಕಾರಗಳಲ್ಲಿ ಮೊಬೈಲ್​ಫೋನ್ ಸಹ ಒಂದು ಎಂದು ಪರಿಗಣಿತವಾಗಿದೆ. ಈಗಂತೂ ಮೊಬೈಲ್​ಫೋನ್ ಬಳಕೆ ಮಾಡದ ವ್ಯಕ್ತಿಯೇ ಇಲ್ಲ ಎಂಬಂತಾಗಿದೆ. ಸ್ಮಾರ್ಟ್​ಫೋನ್​ಗಳ ಯುಗ ಆರಂಭಗೊಂಡ ಮೇಲೆ ಹಾಗೂ ಇಂಟರ್​ನೆಟ್ ಸಂಪರ್ಕ ಅಗ್ಗವಾದ ನಂತರವಂತೂ ಮೊಬೈಲ್ ಬಳಕೆಯ ಪ್ರಮಾಣ ಹೆಚ್ಚಿದ್ದು, ವ್ಯಾಪ್ತಿ ವ್ಯಾಪಕವಾಗಿ ಹಬ್ಬಿದೆ. ಜನರು ಇದನ್ನು ಅಗತ್ಯ ಕೆಲಸಗಳಿಗೆ ಮಾತ್ರ ಬಳಕೆ ಮಾಡಲು ಸೀಮಿತಗೊಳಿಸುತ್ತಿಲ್ಲ. ಅನಗತ್ಯ ಹಾಗೂ ಮಿತಿ ಮೀರಿದ ಬಳಕೆಯ ಮೂಲಕ ಇದರ ದಾಸರಾಗುತ್ತಿದ್ದಾರೆ; ವ್ಯಸನಿಗಳಾಗಿ ಪರಿಣಮಿಸುತ್ತಿದ್ದಾರೆ. ವಯಸ್ಕರೇ ಈ ಉಪಕರಣದ ಮೋಹಕ್ಕೆ ಸಿಲುಕಿರುವಾಗ ಮಕ್ಕಳು ಇದರಿಂದ ಹೊರತಾಗಿರಲು ಹೇಗೆ ಸಾಧ್ಯ?

ಕೋವಿಡ್ ಸಾಂಕ್ರಾಮಿಕ ಹರಡಿದ ಅವಧಿಯಲ್ಲಿ ಆನ್​ಲೈನ್​ನಲ್ಲೇ ಪಾಠಗಳು ನಡೆದ ಕಾರಣಕ್ಕಾಗಿ ಅನಿವಾರ್ಯವಾಗಿ ಮಕ್ಕಳ ಕೈಗೆ ಸ್ಮಾರ್ಟ್​ಫೋನ್​ಗಳನ್ನು ಪಾಲಕರು ಕೊಡುವ ಪರಿಸ್ಥಿತಿ ಸೃಷ್ಟಿಯಾಯಿತು. ಈಗ ಸಾಕಷ್ಟು ಮಕ್ಕಳು ವಿಡಿಯೋ ಗೇಮಿಂಗ್ ಹಾಗೂ ಸಾಮಾಜಿಕ ಜಾಲತಾಣಗಳ ವ್ಯಸನಿಗಳಾಗಿರುವುದು ಖಾಸಗಿ ಸಂಸ್ಥೆಯೊಂದು ದೇಶಾದ್ಯಂತ ನಡೆಸಿರುವ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಕೆಲವೊಂದಿಷ್ಟು ಮಕ್ಕಳು ಮೊಬೈಲ್​ಫೋನ್​ಗಳಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿರುವುದು ಹಾಗೂ ಆನ್​ಲೈನ್ ಜೂಜಿನಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂಬ ಸಂಗತಿಯಂತೂ ಕಳವಳಕಾರಿಯಾಗಿದೆ. ಮೊಬೈಲ್ ಗೀಳಿಗೆ ಬೀಳುವ ಮಕ್ಕಳು ದೈಹಿಕ ಚಟುವಟಿಕೆಗಳ ಕೊರತೆಯ ಕಾರಣದಿಂದಾಗಿ ಬೊಜ್ಜು ಬೆಳೆಸಿಕೊಳ್ಳುತ್ತಿದ್ದಾರೆ. ದೃಷ್ಟಿ ದೋಷ ಸೇರಿ ನಾನಾ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಖಿನ್ನತೆ, ಮಾನಸಿಕ ಒತ್ತಡದಂತಹ ತೊಂದರೆಗಳಿಗೂ ಸಿಲುಕುತ್ತಿದ್ದಾರೆ ಎಂಬುದರತ್ತ ಈ ಸಮೀಕ್ಷೆಯು ಗಮನಸೆಳೆದಿದೆ. ಇನ್ನು ಮೊಬೈಲ್​ಫೋನ್ ಸೂಸುವ ವಿಕಿರಣಗಳು ಆರೋಗ್ಯಕ್ಕೆ ಹಾನಿಕಾರಕ ಹಾಗೂ ಮಕ್ಕಳ ಮೇಲೆ ಇದು ಹೆಚ್ಚು ದುಷ್ಪರಿಣಾಮ ಮಾಡುತ್ತವೆ ಎಂಬುದು ಗೊತ್ತಿರುವಂತಹದೇ.

ಇನ್ನೊಂದೆಡೆ, ತಮಿಳುನಾಡಿನಾದ್ಯಂತ ದೇವಸ್ಥಾನಗಳಲ್ಲಿ ಮೊಬೈಲ್​ಫೋನ್ ಬಳಕೆ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿರುವ ತೀರ್ಪು ಗಮನಾರ್ಹ. ದೇವರ ಧ್ಯಾನದಲ್ಲಿ ತೊಡಗಲು, ಭಕ್ತಿಪೂರ್ವಕವಾಗಿ ನಮಿಸಲು, ಮಾನಸಿಕ ನೆಮ್ಮದಿ ಕಂಡುಕೊಳ್ಳಲು ಭಕ್ತರು ಭೇಟಿ ನೀಡುವ ದೇವಸ್ಥಾನಗಳಲ್ಲಿ ಕೂಡ ಮೊಬೈಲ್ ರಿಂಗಣ ಸದ್ದು, ಮಾತುಕತೆಗಳ ಕಿರಿಕಿರಿಯು ಅಲ್ಲಿನ ಪಾವಿತ್ರ್ಯಕ್ಕೆ ಭಂಗವುಂಟು ಮಾಡುವಂತಹುದೇ ಆಗಿದೆ. ಈ ಹಿನ್ನೆಲೆಯಲ್ಲಿ, ದೇವಸ್ಥಾನಗಳಲ್ಲಿ ಮೊಬೈಲ್​ಫೋನ್ ಡಿಪಾಸಿಟ್ ಲಾಕರ್​ಗಳ ವ್ಯವಸ್ಥೆ ಕಲ್ಪಿಸುವಂತೆ ಹೈಕೋರ್ಟ್ ಸೂಚಿಸಿರುವುದು ಇತರೆಡೆಯೂ ಜಾರಿಗೆ ತರಲು ಪರಿಶೀಲಿಸಬಹುದಾದ ಸಲಹೆಯೇ ಆಗಿದೆ. ಮೊಬೈಲ್ ಫೋನ್ ಬಳಸುವುದರ ಮುಖ್ಯ ಪ್ರಯೋಜನವೆಂದರೆ ಸುಲಭವಾದ, ವೇಗವಾದ ಹಾಗೂ ಅಗ್ಗವಾದ ಸಂವಹನ ವಿಧಾನವಾಗಿರುವುದು. ವ್ಯಾಪಾರ- ವಹಿವಾಟಿಗೂ ಬಳಕೆಯಾಗಿ ಹಣ ಸಂಪಾದನೆಯ ಮಾರ್ಗವೂ ಆಗಿದೆ. ತುರ್ತು ಸಂದರ್ಭಗಳಲ್ಲಿ ಸಹಾಯ ಕೋರಲು ಸಂಪರ್ಕಕ್ಕೆ ಅತ್ಯುತ್ತಮ ಉಪಕರಣ ಇದಾಗಿದೆ. ಇದರಲ್ಲಿಯೇ ಫೋಟೋ, ವಿಡಿಯೋ ತೆಗೆಯಬಹುದಾಗಿದೆ. ಹಿಂದೆ ಒಂದು ಫೋನ್, ಕ್ಯಾಮರಾ, ಕಂಪ್ಯೂಟರ್ ಮಾಡುವ ಎಲ್ಲ ಕೆಲಸವನ್ನು ಅಂಗೈಯಲ್ಲೇ ಇರುವ ಒಂದೇಒಂದು ಫೋನ್​ನಿಂದ ಮಾಡಲು ಸಾಧ್ಯವಾಗುತ್ತಿರುವ ಅಂಶದಿಂದಾಗಿಯೇ ಇದರ ಜನಪ್ರಿಯತೆ ಹಾಗೂ ಬಳಕೆ ಉತ್ತುಂಗ ತಲುಪಿದೆ. ಆದರೆ, ಯಾವುದೇ ವಸ್ತುವನ್ನು ಅಗತ್ಯಕ್ಕೆ ತಕ್ಕಂತೆ ಹಿತಮಿತವಾಗಿ ಬಳಸಿದರೆ ಪ್ರಯೋಜನಕಾರಿ; ಇಲ್ಲದಿದ್ದರೆ ಅಪಾಯಕಾರಿ. ಅತಿಯಾದರೆ ಅಮೃತವೂ ವಿಷ ಎನ್ನುವುದನ್ನು ಮರೆಯಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net