ಚಿರಂಜೀವಿ ಜತೆಗೆ ನಟಿಸುವುದಿಲ್ಲ ಎಂದ ವಿಜಯಶಾಂತಿ

Vijayshanthi - Final
Published on

ಹೈದರಾಬಾದ್: ಟಾಲಿವುಡ್​ನ ಮೆಗಾಸ್ಟಾರ್ ಚಿರಂಜೀವಿ ಜತೆಗೆ ನಟಿಸುವುದಕ್ಕೆ ಒಳ್ಳೆಯ ಅವಕಾಶ ಸಿಕ್ಕರೆ ಖಂಡಿತಾ ನಟಿಸುವುದಾಗಿ ಹೇಳಿದ್ದ ಹಿರಿಯ ನಟಿ ವಿಜಯಶಾಂತಿ, ಈಗ ನಟಿಸುವುದಿಲ್ಲ ಎಂದು ಹೇಳಿದ್ದರು.

ಈ ವರ್ಷ ಬಿಡುಗಡೆಯಾದ ಮಹೇಶ್​ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ 13 ವರ್ಷಗಳ ನಂತರ ವಾಪಸ್ಸಾಗಿದ್ದರು ವಿಜಯಶಾಂತಿ. ಈ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಚಿರಂಜೀವಿ ಸಹ ಭಾಗವಹಿಸಿದ್ದರು. ಒಂದೊಳ್ಳೆಯ ಅವಕಾಶ ಸಿಕ್ಕರೆ ಚಿರಂಜೀವಿ ಜತೆಗೆ ನಟಿಸುವುದಾಗಿ ವಿಜಯಶಾಂತಿ ಹೇಳಿಕೊಂಡಿದ್ದರು. ಆದರೆ, ಇದೀಗ ಚಿರಂಜೀವಿಯಷ್ಟೇ ಅಲ್ಲ, ಬೇರೆ ಯಾವ ನಟನ ಜತೆಗೂ ನಟಿಸುವ ಉದ್ದೇಶ ಸದ್ಯಕ್ಕಿಲ್ಲ ಎಂದು ವಿಜಯಶಾಂತಿ ಹೇಳಿಕೊಂಡಿದ್ದಾರೆ.

ವಿಜಯಶಾಂತಿ ಅವರು ಹೀಗೆ ಉಲ್ಟಾ ಹೊಡೆಯುವುದಕ್ಕೆ ಕಾರಣವೇನು ಎಂಬ ಪ್ರಶ್ನೆ ಬರಬಹುದು. ವಿಜಯಶಾಂತಿ ಅವರು ಇತ್ತೀಚೆಗೆ ಕಾಂಗ್ರೆಸ್​ನಿಂದ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದು, ರಾಜಕೀಯದಲ್ಲಿ ಬಿಜಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಮಗೆ ನಟಿಸುವುದಕ್ಕೆ ಸಮಯವಿಲ್ಲ ಮತ್ತು ಚಿರಂಜೀವಿ ಅಥವಾ ಬೇರೆ ಯಾವ ಹೀರೋ ಚಿತ್ರಗಳಲ್ಲಿ ಅವಕಾಶ ಸಿಕ್ಕರೂ ನಟಿಸುವ ಆಸಕ್ತಿ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲಿಗೆ, 13 ವರ್ಷಗಳ ನಂತರ ಚಿತ್ರರಂಗಕ್ಕೆ ವಾಪಸ್ಸಾಗಿದ್ದ ವಿಜಯಶಾಂತಿ, ರಾಜಕೀಯದಿಂದಾಗಿ ಮತ್ತೆ ನಟನೆಯಿಂದ ದೂರದಾದರೆ ಆಶ್ಚರ್ಯವಿಲ್ಲ.

ಟಾಲಿವುಡ್​ನ ಜನಪ್ರಿಯ ಜೋಡಿಗಳಲ್ಲಿ ಚಿರಂಜೀವಿ ಮತ್ತು ವಿಜಯಶಾಂತಿ ಅವರ ಜೋಡಿ ಸಹ ಒಂದಾಗಿದ್ದು, 80 ಮತ್ತು 90ರ ದಶಕಗಳಲ್ಲಿ ಈ ಜೋಡಿ 'ಯಮುಡಿಕಿ ಮೊಗಡು', 'ಮಂಚಿದೊಂಗ', 'ಕೊಂಡವೀಟಿ ರಾಜ' ಸೇರಿದಂತೆ ಹಲವು ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net