

ವಿಜಯಪುರ: ನಿನ್ನೆ (ಜೂ.27) ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ಸೈನ್ಸ್-ಫಿಕ್ಷನ್, ಥ್ರಿಲ್ಲರ್ ‘ಕಲ್ಕಿ 2898 AD’ ಚಿತ್ರವು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು, ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದ ಪ್ರಭಾಸ್ 'ಕಲ್ಕಿ' ಬಾಕ್ಸ್ ಆಫೀಸ್ನಲ್ಲಿ ಕೂಡ ಅಬ್ಬರಿಸುತ್ತಿದೆ.
ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಕಲ್ಕಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇತ್ತೀಚಿನ ದಿನಗಳಲ್ಲಿ ನಮಗೆಲ್ಲಾ ತಿಳಿದಿರುವಂತೆ ರಾಜ್ಯದಲ್ಲಿ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳು ಒಂದೊಂದೆ ಕಣ್ಮರೆಯಾಗುತ್ತಿದ್ದು, ಚಿತ್ರಮಂದಿರಗಳಿಗೆ ಉಳಿಗಾಲವಿಲ್ಲ ಎನ್ನುವಂತಾಗಿದೆ. ಅದರಲ್ಲೂ ಸಿಂಗಲ್ ಸ್ಕ್ರೀನ್ ಮಾಲೀಕರು ಪ್ರೇಕ್ಷಕರಿಲ್ಲದೆ, ಬಣಗುಡುತ್ತಿರುವ ಚಿತ್ರಮಂದಿರಗಳನ್ನು ನಡೆಸಲಾಗದೆ, ಅಂತ್ಯವಾಡುತ್ತಿದ್ದಾರೆ.
ಸದ್ಯ ಇದೇ ರೀತಿ ವಿಜಯಪುರದಲ್ಲಿರುವ ಚಿತ್ರಮಂದಿರವೊಂದು ಕಳೆದ ಆರು ತಿಂಗಳಿಂದ ಜನರಿಲ್ಲದೆ, ಪ್ರದರ್ಶನಗಳಿಲ್ಲದೆ ಬಂದ್ ಆಗಿತ್ತು. ಆದರೆ, ಇದೀಗ ಪ್ರಭಾಸ್ ಅಭಿನಯದ 'ಕಲ್ಕಿ' ಸಿನಿಮಾ ತೆರೆಕಂಡಿದ್ದೇ ತಡ, ಹಕ್ಕಿಗಳು ಕಾಣಿಸಿದ ಚಲನಚಿತ್ರಮಂದಿರದಲ್ಲಿ ಜನರ ನೂಕುನುಗ್ಗಲು ಸದ್ದು ಮಾಡಲಾರಂಭಿಸಿದೆ. ಈ ಹಿಂದೆ ಇದೆ ಪ್ರಭಾಸ್ ನಟನೆಯ 'ಸಲಾರ್' ಬಿಡುಗಡೆ ಸಂದರ್ಭದಲ್ಲಿ ಚಲನಚಿತ್ರ ಮಂದಿರಗಳು ಭರ್ತಿಯಾಗಿದ್ದು, ಆ ನಂತರದಲ್ಲಿ ಪ್ರೇಕ್ಷಕರಿಲ್ಲದೆ ಬಣಗುಡುತ್ತಿತ್ತು.
ಬಹಳಷ್ಟು ಸಂದರ್ಭದಲ್ಲಿ ಪ್ರೇಕ್ಷಕರಿಲ್ಲದೆ ಚಿತ್ರಮಂದಿರ ನಡೆಸದ ಪರಿಸ್ಥಿತಿ ನಿರ್ವಣವಾಗಿ, ಕೆಲವು ಬಾರಿ ಕೇವಲ 5ರಿಂದ 7 ಪ್ರೇಕ್ಷಕರಿಗಾಗಿ ಸಿನಿಮಾ ತೋರಿಸಿದ ಸಂದರ್ಭಗಳೂ ಇದ್ದವು. ಇದೀಗ ಪ್ರಭಾಸ್ ನಟನೆಯ 'ಕಲ್ಕಿ' ಸಿನಿಮಾ ಬಿಡುಗಡೆಯಾಗಿದ್ದು, ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಗುರುವಾರ ಬೆಳಗ್ಗೆ 7 ಗಂಟೆಗೆ ಪಟ್ಟಣದ ಗೌರಿಶಂಕರ ಚಲನಚಿತ್ರ ಮಂದಿರದ ಬಳಿ ಜನ ಕಲ್ಕಿ ಸಿನಿಮಾ ಟಿಕೆಟ್ಗಾಗಿ ಕ್ಯೂ ನಿಂತಿದ್ದರು. ನಾಲ್ಕು ಆಟಗಳು ಗೌರಿಶಂಕರ್ ಥಿಯೇಟರ್ನಲ್ಲಿ ಪ್ರದರ್ಶನವಾಗುತ್ತಿದ್ದು, ಚಿತ್ರಮಂದಿರ ಭರ್ತಿಯಾಗಿದೆ ಎಂಬ ಬೋರ್ಡ್ನೊಂದಿಗೆ ಮಂದಹಾಸ ಬೀರಿದೆ.
ಪ್ರೇಕ್ಷಕರ ಆಗಮನದಿಂದ ಗೌರಿಶಂಕರ ಚಿತ್ರಮಂದಿರದ ಮಾಲೀಕ ಎಂ.ಸತೀಶ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಪ್ಯಾನ್ ಇಂಡಿಯಾ ಕಲ್ಕಿ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ ಮುಂತಾದವರ ತಾರಾಗಣವಿದೆ.