ವಿಜಯಲಕ್ಷ್ಮೀ vs ಸೀಮನ್​: ಸುಮಾರು 10 ವರ್ಷಗಳ ವಿವಾದ ಕೊನೆಗೂ ಅಂತ್ಯ, ಅದಕ್ಕೆ ಕಾರಣ ಕ್ಷಮೆ! Vijayalakshmi

Vijayalakshmi
Published on

Vijayalakshmi : ನಟ ಹಾಗೂ ರಾಜಕಾರಣಿ ಸೀಮನ್ ಮತ್ತು ನಟಿ ವಿಜಯಲಕ್ಷ್ಮಿ ಪರಸ್ಪರ ಬೇಷರತ್ತಾಗಿ ಕ್ಷಮೆಯಾಚಿಸಿದ್ದು, ಅವರಿಬ್ಬರ ನಡುವಿನ ಹಲವು ವರ್ಷಗಳ ವಿವಾದ ಕೊನೆಗೂ ಅಂತ್ಯಗೊಂಡಿದೆ.

'ನಾಮ್ ತಮಿಳರ್ ಕಚ್ಚಿ' ಪಕ್ಷದ ನಾಯಕ ಸೀಮನ್ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾರೆ ಮತ್ತು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ, ತನಗೆ ನ್ಯಾಯ ಬೇಕು ಅಂತ ನಟಿ ವಿಜಯಲಕ್ಷ್ಮಿ ಅವರು ಸುಮಾರು ಒಂದು ದಶಕದಿಂದ ಹೋರಾಡುತ್ತಿದ್ದರು. ಇಬ್ಬರ ನಡುವಿನ ವಿವಾದ ಪೊಲೀಸ್ ಠಾಣೆಗಳ ಮೆಟ್ಟಿಲೇರಿತ್ತು. ಇದಾದ ಬಳಿಕ ಹೈಕೋರ್ಟ್ ಹಂತಕ್ಕೂ ಹೋಯಿತು. ಈ ವೇಳೆ ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಸೀಮನ್ ಅವರು ಅರ್ಜಿ ಸಲ್ಲಿಸಿದ್ದರು. ಆದರೆ, ಮದ್ರಾಸ್​ ಹೈಕೋರ್ಟ್ ಮನವಿಯನ್ನು ತಿರಸ್ಕರಿಸಿತು.

ಇದರ ನಡುವೆ ಅವರಿಬ್ಬರ ನಡುವಿನ ವಿವಾದವನ್ನು ಹೆಚ್ಚುತ್ತಲೇ ಇತ್ತು. ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಲೇ ಇದ್ದರು. ಅದೇ ಸಮಯದಲ್ಲಿ, ಸೀಮನ್ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿ, ತನ್ನ ವಿರುದ್ಧದ ಪ್ರಕರಣವನ್ನು ರದ್ದು ಮಾಡುವಂತೆ ಮನವಿ ಮಾಡಿದೆ. ಇದೇ ಸಮಯದಲ್ಲಿ, ವಿಜಯಲಕ್ಷ್ಮಿ ಅವರು ಸೀಮನ್ ವಿರುದ್ಧ ಹೂಡಿದ್ದ ಪ್ರಕರಣವನ್ನು ಹಿಂತೆಗೆದುಕೊಳ್ಳುವುದಾಗಿ ಲಿಖಿತ ಹೇಳಿಕೆಯನ್ನು ಪೊಲೀಸರಿಗೆ ಸಲ್ಲಿಸಿದರು. ಆದರೂ ಈ ವಿವಾದ ನ್ಯಾಯಾಲಯದಲ್ಲಿದ್ದರಿಂದ ವಿಚಾರಣೆಯನ್ನು ಎದುರಿಸಬೇಕಾಯಿತು.

ಸೀಮನ್ ಮತ್ತು ವಿಜಯಲಕ್ಷ್ಮಿ ಪರಸ್ಪರ ಕ್ಷಮೆಯಾಚಿಸಿದ ಬಳಿಕ ಈ ವಿವಾದವು ಅಂತಿಮವಾಗಿ ನ್ಯಾಯಾಲಯದಲ್ಲಿ ಇತ್ಯರ್ಥವಾಯಿತು. ಬುಧವಾರ (ಅ.08) ನಡೆದ ವಿಚಾರಣೆಯ ಸಮಯದಲ್ಲಿ ಕ್ಷಮೆಯಾಚನೆ ಸಂಗತಿ ಸುಪ್ರೀಂ ಕೋರ್ಟ್ ಪೀಠದ ಮುಂದೆ ಬಂದಿತು. ಎರಡೂ ಕಡೆಯವರ ವಾದಗಳ ನಂತರ, ಅವರು ಪರಸ್ಪರ ಕ್ಷಮೆಯಾಚನೆ ಸ್ವೀಕರಿಸಿದನ್ನು ಪರಿಗಣಿಸಿದ ನ್ಯಾಯಾಲಯ ಪ್ರಕರಣವನ್ನು ಮುಕ್ತಾಯಗೊಳಿಸಿತು. ಇನ್ನು ಮುಂದೆ ಅಫಿಡವಿಟ್‌ನಲ್ಲಿ ಹೇಳಿದಂತೆ ವರ್ತಿಸುವಂತೆ ಇಬ್ಬರಿಗೂ ಸೂಚಿಸಲಾಯಿತು.

ಏನಿದು ಪ್ರಕರಣ?

ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ತನಗೆ ಮೋಸ ಮಾಡಿದ್ದಾನೆ ಎಂದು ಚೆನ್ನೈ ನಗರ ಪೊಲೀಸ್ ಆಯುಕ್ತರಿಗೆ ವಿಜಯಲಕ್ಷ್ಮೀ ದೂರು ನೀಡಿದ್ದರು. ವಂಚನೆ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ನಿಷೇಧ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸೀಮನ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ವಿಜಯಲಕ್ಷ್ಮಿ 2011ರಲ್ಲಿ ಇದೇ ಆರೋಪದೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದರು. ಎಐಎಡಿಎಂಕೆ ಸರ್ಕಾರ ಅಧಿಕಾರದಲ್ಲಿದ್ದಾಗ ಯಾವುದೇ ತನಿಖೆ ನಡೆಸಲಿಲ್ಲ ಎಂದು ವಿಜಯಲಕ್ಷ್ಮಿ ಹೇಳಿದರು. ಆದರೆ, ಡಿಎಂಕೆ ಸರ್ಕಾರದ ಮೇಲೆ ನಂಬಿಕೆ ಇದ್ದ ಕಾರಣ ಮತ್ತೆ ದೂರು ದಾಖಲಿಸಿದ್ದಾಗಿ ತಿಳಿಸಿದ್ದರು. ಹಣ ಹಾಗೂ ಚಿನ್ನಾಭರಣ ಪಡೆದು ವಂಚಿಸಿರುವುದಲ್ಲದೆ, ಲೈಂಗಿಕ ದೌರ್ಜನ್ಯ ಎಸಗಿ, ಬಲವಂತವಾಗಿ 7 ಬಾರಿ ಗರ್ಭಪಾತ ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಮಹಿಳೆಯರಿಗೆ ಗೌರವ ಕೊಡದ ಸೀಮನ್​ನನ್ನು ನ್ಯಾಯಾಲಯ ಮುಂದೆ ತಂದು ನಿಲ್ಲಿಸುವುದೇ ನನ್ನ ಗುರಿ ಎಂದು ಈ ಹಿಂದೆ ವಿಜಯಲಕ್ಷ್ಮೀ ಹೇಳಿದ್ದರು. ಇದೀಗ ಸುಪ್ರಿಂಕೋರ್ಟ್​ ಸೀಮನ್​ ವಿರುದ್ಧದ ಪ್ರಕರಣವನ್ನೇ ರದ್ದು ಮಾಡಿದ್ದು, ಪ್ರಕರಣ ಇತ್ಯರ್ಥಗೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net