

Kantara Chapter 1 : ರಿಷಭ್ ಶೆಟ್ಟಿ ಅವರೇ ನಿರ್ದೇಶಿಸಿ ನಟಿಸಿರುವ ಕಾಂತಾರ: ಚಾಪ್ಟರ್ 1 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆಯೊಂದಿಗೆ ದಾಖಲೆ ಬರೆಯುತ್ತಿದೆ. ಬಿಡುಗಡೆಯಾದ 4 ದಿನಗಳಲ್ಲಿ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಚಿತ್ರಕ್ಕೆ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ಇತ್ತೀಚೆಗೆ, ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಈ ಪಟ್ಟಿಗೆ ಸೇರಿದ್ದಾರೆ.
ತೆರೆಯ ಮೇಲೆ ರಿಷಭ್ ಶೆಟ್ಟಿ ಅವರು ಮಾಡಿರುವ ಮ್ಯಾಜಿಕ್ನಿಂದ ರಾಹುಲ್ ಮಾರುಹೋಗಿದ್ದಾರೆ. ನಾನು ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿದೆ. ರಿಷಭ್ ಶೆಟ್ಟಿ ಮತ್ತೊಮ್ಮೆ ಪವಾಡ ಸೃಷ್ಟಿಸಿದ್ದಾರೆ. ಈ ಸಿನಿಮಾ ಮಂಗಳೂರಿನ ಸುಂದರ ಜನರ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ರಾಹುಲ್ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
2022 ರಲ್ಲಿ ಬಿಡುಗಡೆಯಾದ ಮತ್ತು ಸಂಚಲನವನ್ನು ಸೃಷ್ಟಿಸಿದ ಕಾಂತಾರ ಚಿತ್ರದ ಸೀಕ್ವೆಲ್ ಕೂಡ ನನಗೆ ತುಂಬಾ ಇಷ್ಟವಾಗಿದೆ ಎಂದು ರಾಹುಲ್ ಆಗಾಗ್ಗೆ ಹೇಳಿಕೊಂಡಿದ್ದಾರೆ. ಕರ್ನಾಟಕ ಮೂಲದ ರಾಹುಲ್, ಐಪಿಎಲ್-2025 ರಲ್ಲಿ ಕಾಂತಾರ ಚಿತ್ರದ ರೀತಿಯಲ್ಲಿ ಸಂಭ್ರಮಾಚರಣೆಗಳನ್ನು ಮಾಡಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭರ್ಜರಿ ಆಟ ಪ್ರದರ್ಶಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿಗೆ ಕಾರಣರಾದ ಬಳಿಕ ರಾಹುಲ್ ಸಂಭ್ರಮಿಸಿದ್ದರು. ಈ ವೇಳೆ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಇನ್ನು ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ತವರಿನ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ರಾಹುಲ್ ಆಡುತ್ತಿದ್ದಾರೆ. ಮೊದಲ ಟೆಸ್ಟ್ ಮುಗಿದ ಬಳಿಕ ವಿರಾಮ ಸಮಯದಲ್ಲಿ ಕಾಂತಾರ ಚಿತ್ರವನ್ನು ನೋಡಿ ಆನಂದಿಸಿದ್ದಾರೆ. ಅಹಮದಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ರಾಹುಲ್ ಅದ್ಭುತ ಶತಕ ಗಳಿಸಿದರು. ಈಗ, ಕೆಎಲ್ ಶುಕ್ರವಾರದಿಂದ ದೆಹಲಿಯಲ್ಲಿ ಪ್ರಾರಂಭವಾಗುವ ಎರಡನೇ ಟೆಸ್ಟ್‌ಗೆ ತಯಾರಿ ನಡೆಸಲಿದ್ದಾರೆ. ಈಗಾಗಲೇ ದೆಹಲಿ ತಲುಪಿರುವ ಭಾರತೀಯ ತಂಡ ಎರಡು ದಿನಗಳ ಅಭ್ಯಾಸದಲ್ಲಿ ಭಾಗವಹಿಸಲಿದೆ.
ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದಾರೆ. ಕಳೆದ ಹತ್ತು ಇನ್ನಿಂಗ್ಸ್‌ಗಳಲ್ಲಿ ಅವರು 532 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಭಾರತ ಸರಣಿಯನ್ನು 2-2 ಅಂತರದಿಂದ ಸಮಬಲಗೊಳಿಸುವಲ್ಲಿ ರಾಹುಲ್ ಪ್ರಮುಖ ಪಾತ್ರ ವಹಿಸಿದ್ದರು. ಈಗ ಅವರು ವಿಂಡೀಸ್ ವಿರುದ್ಧ ಅದೇ ಆವೇಗವನ್ನು ಮುಂದುವರಿಸುತ್ತಿದ್ದಾರೆ. (ಏಜೆನ್ಸೀಸ್)