ಕಮಲ್ ಜಾಗಕ್ಕೆ ಬರ್ತಾರಂತೆ ವಿಜಯ್ ಸೇತುಪತಿ ... ಕಾಲಿವುಡ್‌ನಲ್ಲೊಂದು ಬ್ರೇಕಿಂಗ್ ನ್ಯೂಸ್

Kamal Hassan- Vijay Sethupathi Final
Published on

‘ಇಂಡಿಯನ್ 2’ ತಮ್ಮ ಕೊನೆಯ ಚಿತ್ರವಾಗಲಿದೆ ಎಂದು ಕಮಲ್ ಹಾಸನ್ ಹಿಂದೊಮ್ಮೆ ಹೇಳಿಕೊಂಡಿದ್ದರು. ಆದರೆ, ಕಳೆದ ವರ್ಷದ ಕೊನೆಯಲ್ಲಿ, ‘ಇಂಡಿಯನ್ 2’ ಚಿತ್ರದ ನಂತರ ‘ತಲೈವನ್ ಇರುಕ್ಕಿಂದ್ರಾನ್’ ಎಂಬ ಚಿತ್ರವನ್ನು ನಿರ್ದೇಶಿಸುವುದಷ್ಟೇ ಅಲ್ಲ, ಅದರಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳಿದ್ದರು. ಇದೀಗ ಬಂದಿರುವ ಸುದ್ದಿಯಂತೆ, ಆ ಚಿತ್ರದಲ್ಲಿ ಕಮಲ್ ಬದಲು ವಿಜಯ್ ಸೇತುಪತಿ ನಟಿಸುವ ಸಾಧ್ಯತೆ ಇದೆಯಂತೆ.

ಹೌದು, ಕಾಲಿವುಡ್‌ನಲ್ಲಿ ಇಂಥದ್ದೊಂದು ಬ್ರೇಕಿಂಗ್ ನ್ಯೂಸ್ ಮಂಗಳವಾರದಿಂದ ಕೇಳಿ ಬರುತ್ತಿದೆ. ಅದಕ್ಕೆ ಕಾರಣವೂ ಇದೆ. ಮುಂದಿನ ವರ್ಷ ತಮಿಳುನಾಡಿನಲ್ಲಿ ಅಸೆಂಬ್ಲಿ ಚುನಾವಣೆಗಳು ನಡೆಯಲಿವೆ. ಈಗಾಗಲೇ ಒಂದು ರಾಜಕೀಯ ಪಕ್ಷವನ್ನು ಸ್ಥಾಪಿಸಿರುವ ಉಳಗನಾಯಗನ್, 2021ರ ಚುನಾವಣೆಗಳಲ್ಲಿ ದೊಡ್ಡ ಮಟ್ಟದಲ್ಲಿ ತಮ್ಮ ಪಕ್ಷ ಸ್ಪರ್ಧಿಸಬೇಕೆಂದು ಬಯಸಿದ್ದರು. ಒಮ್ಮೆ ಚುನಾವಣೆ, ರಾಜಕೀಯ ಅಂತ ಇಳಿದಿರೆ ಮತ್ತೆ ಚಿತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಾಗುತ್ತದೋ ಇಲ್ಲವೋ ಎಂಬ ಭಯದಿಂದ ‘ತಲೈವನ್ ಇರುಕ್ಕಿಂದ್ರಾನ್’ ಎಂಬ ಚಿತ್ರದಲ್ಲಿ ಕೊನೆಯ ಬಾರಿಗೆ ನಟಿಸುವುದಕ್ಕೆ ತಯಾರಿ ನಡೆಸಿದ್ದರು.

ತಮಿಳು ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗಬೇಕಿದ್ದ ಈ ಚಿತ್ರದ ತಮಿಳು ಅವತರಣಿಕೆಯಲ್ಲಿ ಕಮಲ್ ನಟಿಸಿದರೆ, ಹಿಂದಿ ವರ್ಷನ್‌ನಲ್ಲಿ ಸೈಫ್​ ಅಲಿ ಖಾನ್ ನಟಿಸುವ ಸಾಧ್ಯತೆ ಇತ್ತು. ಇನ್ನು ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರ ನಿರ್ಮಿಸಿದರೆ, ಎ.ಆರ್. ರಹಮಾನ್ ಸಂಗೀತ ಸಂಯೋಜಿಸುತ್ತಾರೆ ಎಂದು ಹೇಳಲಾಗಿತ್ತು. ಲಾಕ್‌ಡೌನ್ ಇರುವುದರಿಂದ ಚಿತ್ರ ಮುಂದಕ್ಕೆ ಹೋಗಿದ್ದು, ಇನ್ನು ಈ ಚಿತ್ರದಲ್ಲಿ ಕಮಲ್ ಹಾಸನ್ ನಟಿಸುವುದೇ ಸಂಶಯ ಎಂದು ಹೇಳಲಾಗುತ್ತಿದೆ.

ಹಾಗಾದರೆ, ಅವರ ಜಾಗಕ್ಕೆ ಯಾರು ಬರುತ್ತಾರೆ ಎಂಬ ಪ್ರಶ್ನೆಗೆ, ಉತ್ತರವಾಗಿ ವಿಜಯ್ ಸೇತುಪತಿ ಹೆಸರು ಬರುತ್ತಿದೆ. ಇನ್ನು ಈ ಚಿತ್ರವನ್ನೂ ಬೇರೊಬ್ಬರು ನಿರ್ದೇಶಿಸುವ ಸಾಧ್ಯತೆ ಹೆಚ್ಚಿದೆ. ಅಂತಿಮವಾಗಿ ಚಿತ್ರದಲ್ಲಿ ಯಾರು ನಟಿಸುತ್ತಾರೆ ಮತ್ತು ಯಾರು ನಿರ್ದೇಶನ ಮಾಡಲಿದ್ದಾರೆ ಎಂಬ ರಹಸ್ಯಕ್ಕೆ ಕೆಲವೇ ಕೆಲವು ದಿನಗಳಲ್ಲಿ ಉತ್ತರ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net