ಹೈದರಬಾದ್: ನಾನಿ ನಟನೆಯ ಎವಡೆ ಸುಬ್ರಹ್ಮಣ್ಯಂ ಚಿತ್ರದ ಮೂಲಕ ವಿಜಯ್ ದೇವರಕೊಂಡ ಖ್ಯಾತಿ ಗಳಿಸಿದರು. ಈ ಸಿನಿಮಾದಲ್ಲಿ ನಾನಿ-ವಿಜಯ್ ಒಟ್ಟಿಗೆ ನಟಿಸಿದರು. ಆ ನಂತರ ವಿಜಯ್ ಹೀರೋ ಕೂಡ ಆದರು. ಇಬ್ಬರು ಟಾಲಿವುಡ್ನಲ್ಲಿ ಮಿಂಚುತ್ತಿರುವ ಹೊತ್ತಿನಲ್ಲೇ ವಿಜಯ್ ಮತ್ತು ನಾನಿ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಮಾತುಗಳು ಕೇಳಿಬಂತು. ಇಬ್ಬರ ಅಭಿಮಾನಿಗಳು ಈ ವಿಚಾರವಾಗಿ ಆಗಾಗ ಕಿತ್ತಾಡಿಕೊಳ್ಳುತ್ತಲೇ ಇರುತ್ತಾರೆ. ಅಭಿಮಾನಿಗಳ ಕಚ್ಚಾಟದಿಂದ ನಾನಿ ಮತ್ತು ವಿಜಯ್ಗೆ ಇರುಸು ಮುರುಸು ಉಂಟಾಗಿರುವುದು ನಿಜ.
ಆದರೆ ಇತ್ತೀಚೆಗೆ ನಾನಿ ಮತ್ತು ವಿಜಯ್ ಇಬ್ಬರೂ ತಮ್ಮ ನಡುವೆ ಯಾವುದೇ ವಿವಾದ ಅಥವಾ ಭಿನ್ನಾಭಿಪ್ರಾಯಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಬಾಲಕೃಷ್ಣ ಅವರ 50ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ನಾನಿ-ವಿಜಯ್ ದೇವರಕೊಂಡ ಒಂದೇ ವೇದಿಕೆ ಮೇಲೆ ಪರಸ್ಪರ ಅಪ್ಪಿಕೊಂಡು ಮಾತನಾಡಿದ್ದು ವೈರಲ್ ಆಗಿತ್ತು. ಇತ್ತೀಚೆಗೆ ಮತ್ತೊಮ್ಮೆ ನಾನಿ ಮತ್ತು ವಿಜಯ್ ದೇವರಕೊಂಡ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.
ನಿನ್ನೆ ದುಬೈನಲ್ಲಿ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ದಸರಾ ಚಿತ್ರಕ್ಕಾಗಿ ನಾನಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ವಿಶೇಷ ಏನೆಂದರೆ, ವಿಜಯ್ ದೇವರಕೊಂಡ ಅವರು ತಮ್ಮ ಕೈಯಿಂದ ನಾನಿ ಪ್ರಶಸ್ತಿ ನೀಡಿದರು. ಪ್ರಶಸ್ತಿ ನೀಡುವ ಮುನ್ನ ಮಾತನಾಡಿದ ವಿಜಯ್, ನಾನಿ ನನ್ನ ಮೊದಲ ಸಿನಿಮಾದ ನಾಯಕ. ನಿರ್ದೇಶಕ ನಾಗ್ ಅಶ್ವಿನ್ ಅವರು ಕರೆ ಮಾಡಿ ಎವಡೆ ಸುಬ್ರಹ್ಮಣ್ಯಂ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದರು. ಈ ಸಿನಿಮಾಗೆ ನಾನಿ ಅವರು ನಾಯಕ ಎಂದು ಗೊತ್ತಾ ಬಳಿಕ ಹೇಗೆ ಮಾತನಾಡುವುದು ಎಂಬ ಯೋಚನೆ ಇತ್ತು. ಇದೇ ಚಿಂತೆಯಲ್ಲಿ ನಾನು ಅವರ ಆಫೀಸ್ಗೆ ಹೋದೆ. ನಾನಿ ಅವರು ನನಗೆ ಸಾಕಷ್ಟು ಬೆಂಬಲ ನೀಡಿದರು. ಇಂಡಸ್ಟ್ರಿಯಲ್ಲಿ ಎಲ್ಲರೂ ನಾನಿ ಅವರನ್ನು ಅಣ್ಣಾ ಎಂದೇ ಕರೆಯುತ್ತಾರೆ. ಏಕೆ ಎಂದು ನನಗೆ ಅರ್ಥವಾಗುತ್ತಿಲ್ಲ. ಆದರೆ ಇಂದಿನಿಂದ ನಾನು ಕೂಡ ನಿಮ್ಮನ್ನು ಅಣ್ಣಾ ಎಂದು ಕರೆಯುತ್ತೇನೆ ಎಂದು ವಿಜಯ್ ದೇವರಕೊಂಡ ಹೇಳಿದರು.
ಬಳಿಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾನಿ, ಇಡೀ ಚಿತ್ರೊದ್ಯಮವೇ ಒಂದು ಸರ್ಕಲ್ ಇದ್ದಂತೆ. ಇಂದು ವಿಜಯ್ ದೇವರಕೊಂಡ ಅವರ ಕೈಯಿಂದ ಪ್ರಶಸ್ತಿ ಸ್ವೀಕರಿಸಲು ಖುಷಿಯಾಗುತ್ತಿದೆ. ಎವಡೆ ಸುಬ್ರಹ್ಮಣ್ಯಂ ಚಿತ್ರೀಕರಣದ ವೇಳೆ ಸಾಕಷ್ಟು ಅನುಮಾನಗಳನ್ನು ಕೇಳುತ್ತಿದ್ದರು. ಅವರು ಬಹಳ ಕಲಿತ ವ್ಯಕ್ತಿ. ಕಷ್ಟಪಟ್ಟು ಒಂದೊಂದೇ ಮೆಟ್ಟಿಲು ಹತ್ತಿದರು. ಇವತ್ತು ನನಗೆ ಅವಾರ್ಡ್ ಕೊಟ್ಟಿದ್ದಾರೆ. ಮುಂದಿನ ವರ್ಷ ನಾನು ಅವರಿಗೆ ಅವಾರ್ಡ್ ಕೊಡ್ತೀನಿ ಎಂದು ಹೇಳಿದರು.
ಸದ್ಯ ನಾನಿ ಮತ್ತು ವಿಜಯ್ ದೇವರಕೊಂಡ ಅವರ ವಿಡಿಯೋ ವೈರಲ್ ಆಗಿದ್ದು, ಇಬ್ಬರ ನಡುವೆ ಯಾವುದೇ ವಿವಾದವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈ ವಿಡಿಯೋ ನೋಡಿಯಾದರೂ ಇಬ್ಬರ ಅಭಿಮಾನಿಗಳು ತಮ್ಮ ಸಮರ ನಿಲ್ಲಿಸಿದರೆ ಒಳ್ಳೆಯದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. (ಏಜೆನ್ಸೀಸ್)
ಉಪನ್ಯಾಸದ ನಡುವೆ ಸರ್ ಮಲಗಬಹುದಾ ಎಂದು ಕೇಳಿದ ವಿದ್ಯಾರ್ಥಿನಿಯರು! ಲೆಕ್ಚರರ್ ಕೊಟ್ಟ ಉತ್ತರ ವೈರಲ್
200 ನೀರಿನ ಟ್ಯಾಂಕರ್, 35 ದಿನ… ದೇವರ ಸಿನಿಮಾದ ಆ್ಯಕ್ಷನ್ ಸೀಕ್ವೆನ್ಸ್ ಹಿಂದಿದೆ ಇಷ್ಟೊಂದು ಶ್ರಮ!