

ಚೆನ್ನೈ: ಕಾಲಿವುಡ್ ನಟ ಧನುಷ್ ವಿರುದ್ಧ ಮತ್ತೊಂದು ವಿವಾದ ಭುಗಿಲೆದ್ದಿದೆ. ಸೌತ್ ಸಿನಿಮಾ ರಂಗದಲ್ಲಿ ಅಗ್ರಸ್ಥಾನದಲ್ಲಿರುವ ಲೇಡಿ ಸೂಪರ್ ಸ್ಟಾರ್ ನಯನತಾರಾ ನಟನನ್ನು ಟೀಕಿಸಿದ್ದಾರೆ. ನಟಿ ಇತ್ತೀಚೆಗೆ ಧನುಷ್ ನಿಜ ಸ್ವರೂಪ ಇದೇ ಎಂದು ದೂಷಿಸಿ ಮೂರು ಪುಟಗಳ ಸುದೀರ್ಘ ಪತ್ರವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು ಗೊತ್ತೆ ಇದೆ.
ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್(Vignesh Shivan) 2022ರಲ್ಲಿ ವಿವಾಹವಾದರು. ವಿವಾಹದ ಬಳಿಕ ತಮ್ಮ ಜೀವನದ ವಿಚಾರಗಳನ್ನು ಸೇರಿಸಿದ ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್ ಈ ಸಾಕ್ಷ್ಯಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಸಿದ್ಧರಿದ್ದರು. ಆದರೆ ಈ ಮಧ್ಯೆ ಕಾಲಿವುಡ್ ನಟ ಧನುಷ್ ಅನುಮತಿಯಿಲ್ಲದೆ ತಮ್ಮ ಸಿನಿಮಾದ ಹಾಡಿನ ವಿಡಿಯೋ ಬಳಸಲಾಗಿದೆ ಎಂದು ಕಾಪಿರೈಟ್ ಕೇಸ್ ಹಾಕಿದದ್ಉ, 10 ಕೋಟಿ ಪರಿಹಾರ ಕೇಳಿದ್ದಾರೆ ಎಂದು ಆರೋಪಿಸಿ ನಟಿ ನಯನತಾರಾ ಸುದೀರ್ಘ ಪೋಸ್ಟ್ ಅನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಅಸಲಿಗೆ 2015ರಲ್ಲಿ ಧನುಷ್ ನಿರ್ಮಾಣದ ನಾನು ರೌಡಿತಾನ್ ಚಿತ್ರದಲ್ಲಿ ನಯನತಾರಾ ನಟಿಸಿದ್ದರು. ವಿಘ್ನೇಶ್ ಶಿವನ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಸೇತುಪತಿ ಮತ್ತು ನಯನ್ ನಟಿಸಿದ್ದಾರೆ. ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಆ ನಂತರ ನಯನ ಮತ್ತು ಧನುಷ್ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು. ಇತ್ತೀಚೆಗೆ ನಯನತಾರಾ ಅವರ ಸಾಕ್ಷ್ಯಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸಾಕ್ಷ್ಯಚಿತ್ರದಲ್ಲಿ ಧನುಷ್ ನಿರ್ಮಿಸಿರುವ ನಾನು ರೌಡಿತಾನ್ ಚಿತ್ರದ ಹಾಡಿನ 3 ಸೆಕೆಂಡುಗಳ ವಿಡಿಯೋವನ್ನು ಬಳಸಲಾಗಿದೆ.
ಪತ್ನಿಗೆ ಬೆಂಬಲವಾಗಿ ನಿಂತ ಪತಿ ವಿಘ್ನೇಶ್ ಕೂಡ ಧನುಷ್ ಅವರನ್ನು ವ್ಯಂಗ್ಯಮಾಡಿದ್ದಾರೆ. ಧನುಷ್ ಅವರು ಈ ಹಿಂದೆ ಮಾತನಾಡಿದ ವಿಡಿಯೋವೊಂದನ್ನು ಮರು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಧನುಷ್ ಅವರು, ಬೇರೆಯವರ ಮೇಲೆ ಯಾಕೆ ಇಷ್ಟೊಂದು ದ್ವೇಷ.. ಯಾಕೆ ಇಷ್ಟೊಂದು ಕೋಪ.. ಯಾಕೆ ಸೇಡು?.. ಪ್ರೀತಿಯನ್ನು ಹರಡಬೇಕು ಎಂದು ಹೇಳಿದ್ದಾರೆ. ವಿಡಿಯೋ ಹಂಚಿಕೊಂಡಿರುವ ವಿಘ್ನೇಶ್, ಇಂತಹ ಮಾತುಗಳನ್ನು ನಂಬುವ ಅವರ ಮುಗ್ಧ ಅಭಿಮಾನಿಗಳಿಗೂ ದೇವರೇ ಬದಲಾವಣೆ ತರಲಿ. ಪರರ ಸಂತೋಷದಲ್ಲಿ ನಮ್ಮ ಸಂತೋಷ ಕಾಣುವಂತೆ ನಮ್ಮನ್ನು ಬದಲಾಯಿಸು ದೇವರೇ ಎಂದು ಬರೆದಿದ್ದಾರೆ. ಆದರೆ ಈ ಪೋಸ್ಟ್ ಅನ್ನು ಸದ್ಯ ಡಿಲೀಟ್ ಮಾಡಲಾಗಿದೆ.
ಅದಷ್ಟೇ ಅಲ್ಲದೆ ವಿಘ್ನೇಶ್ ನಮ್ಮ ನೆಟ್ಫ್ಲಿಕ್ಸ್ ಸಾಕ್ಷ್ಯಚಿತ್ರದಿಂದ ತೆಗೆದುಹಾಕಲು ಬಯಸುತ್ತಿರುವ 10 ಕೋಟಿ ಕ್ಲಿಪ್... ದಯವಿಟ್ಟು ಇಲ್ಲಿ ಉಚಿತವಾಗಿ ವೀಕ್ಷಿಸಿ ಎಂದು ಹಂಚಿಕೊಂಡಿದ್ದಾರೆ.
ಸಿನಿಮಾರಂಗದ ಕೆಲ ನಟಿಯರು ಲೇಡಿ ಸೂಪರ್ ಸ್ಟಾರ್ ನಯನತಾರಾ ಪರ ಬ್ಯಾಟಿಂಗ್ ಮಾಡಿದ್ದಾರೆ.(ಏಜೆನ್ಸೀಸ್)