Vignesh Puthur : ಕೇರಳ ಮೂಲದ ಯುವ ಸ್ಪಿನ್ನರ್ ವಿಘ್ನೇಶ್ ಪುಥುರ್ ಐಪಿಎಲ್ ಚೊಚ್ಚಲ ಪಂದ್ಯದಲ್ಲೇ ಅಬ್ಬರಿಸಿದ್ದಾರೆ. ಐಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್ ಪರ ಮೈದಾನಕ್ಕಿಳಿದ ವಿಘ್ನೇಶ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಿಂಚಿದರು. ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 32 ರನ್‌ಗಳನ್ನು ನೀಡಿ, ಮೂರು ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು. ನಾಯಕ ರುತುರಾಜ್ ಗಾಯಕ್ವಾಡ್ ಹಾಗೂ ಹಿಟ್ಟರ್‌ಗಳಾದ ಶಿವಂ ದುಬೆ ಮತ್ತು ದೀಪಕ್ ಹೂಡಾ ಅವರನ್ನು ಔಟ್ ಮಾಡಿ ಛಾಪು ಮೂಡಿಸಿದರು. ಈ 24ರ ಹರೆಯದ ಲೆಗ್ ಸ್ಪಿನ್ನರ್ ಎಂಎಸ್ ಧೋನಿಯವರನ್ನೂ ಮೆಚ್ಚಿಸಿದರು. ವಿಘ್ನೇಶ್ ಅವರ ಅದ್ಭುತ ಬೌಲಿಂಗ್ಗೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.

ಇತ್ತೀಚಿನವರೆಗೂ ವಿಘ್ನೇಶ್ ಪುಥುರ್ ಯಾರೆಂದು ಯಾರಿಗೂ ಗೊತ್ತಿರಲಿಲ್ಲ. ಒಂದೇ ಐಪಿಎಲ್ ಪಂದ್ಯದ ಮೂಲಕ ಜಗತ್ತಿಗೆ ಪರಿಚಯವಾಗಿದ್ದಾರೆ. ಅವರು ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ವಿಘ್ನೇಶ್ ಯಾರು ಎಂದು ಗೂಗಲ್ನಲ್ಲಿ ಎಲ್ಲರೂ ಹುಡುಕಾಡುತ್ತಿದ್ದಾರೆ. ಅಷ್ಟೇ ಅಲ್ಲ ಅವರನ್ನು ಹಿಂಬಾಲಿಸುತ್ತಿದ್ದಾರೆ. ಪ್ರಸ್ತುತ, ವಿಘ್ನೇಶ್ ಪುಥುರ್ ಅವರು 4.4 ಫಾಲೋವರ್ಸ್ ಹೊಂದಿದ್ದಾರೆ. ಎರಡು ದಿನಗಳ ಹಿಂದಷ್ಟೇ ಕೇವಲ 25 ಸಾವಿರ ಫಾಲೋವರ್ಸ್ ಹೊಂದಿದ್ದರು. ಆದರೆ, ಈಗ ಬರೋಬ್ಬರಿ 4.4 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಸದ್ಯ ವಿಘ್ನೇಶ್ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ.
ಅಂದಹಾಗೆ ರಾಜ್ಯ ಕ್ರಿಕೆಟ್ ತಂಡದ ಪರ ಒಂದೂ ಪಂದ್ಯ ಆಡುವ ಅವಕಾಶ ಪಡೆಯದ ನಡುವೆಯೂ ಐಪಿಎಲ್ನಲ್ಲಿ ಅವಕಾಶ ಪಡೆದ ಪುಥುರ್, ಮುಂಬೈ ಇಂಡಿಯನ್ಸ್ ಪರ ಮೊದಲ ಪಂದ್ಯದಲ್ಲೇ 3 ವಿಕೆಟ್ ಕಬಳಿಸುವ ಮೂಲಕ ವಿಖ್ಯಾತಿ ಗಳಿಸಿದ್ದಾರೆ. 156 ರನ್ ಗುರಿಯನ್ನು ಸುಲಭವಾಗಿ ತಲುಪುವ ನಿರೀಕ್ಷೆಯಲ್ಲಿದ್ದ ಸಿಎಸ್ಕೆ ಹಾದಿಗೆ ವಿಘ್ನ ತರುವ ಭೀತಿಯನ್ನು ವಿಘ್ನೇಶ್ ಹುಟ್ಟಿಸಿದ್ದರು. ಅಲ್ಲದೆ ಪಂದ್ಯದ ಬಳಿಕ ದಿಗ್ಗಜ ಎಂಎಸ್ ಧೋನಿ ಪ್ರಶಂಸಿಸಿದ ಚಿತ್ರ-ವಿಡಿಯೋ ವೈರಲ್ ಆಗುವುದರೊಂದಿಗೆ ವಿಘ್ನೇಶ್ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿದ್ದಾರೆ.
ಕೇರಳದ ಮಲಪ್ಪುರಂನ ಆಟೋ ಚಾಲಕ ಸುನೀಲ್ ಕುಮಾರ್ ಮತ್ತು ಗೃಹಿಣಿ ಬಿಂದು ದಂಪತಿಯ ಪುತ್ರನಾಗಿರುವ ವಿಘ್ನೇಶ್, ಕ್ಯಾಲಿಕಟ್ ವಿಶ್ವವಿದ್ಯಾಲಯದ ಎಂಎ (ಇಂಗ್ಲಿಷ್ ಸಾಹಿತ್ಯ) ವಿದ್ಯಾರ್ಥಿಯಾಗಿದ್ದಾರೆ. ಪ್ರಥಮ ದರ್ಜೆ ಪಂದ್ಯವನ್ನು ಆಡಿರದ ವಿಘ್ನೇಶ್, ಕೇರಳ ಕ್ರಿಕೆಟ್ ಲೀಗ್ ಮತ್ತು ತಮಿಳುನಾಡು ಪ್ರೀಮಿಯರ್ ಲೀಗ್ನಂಥ ರಾಜ್ಯಮಟ್ಟದ ಟಿ20 ಟೂರ್ನಿಗಳಲ್ಲಿ ಆಡಿದ ಅನುಭವವನ್ನಷ್ಟೇ ಹೊಂದಿದ್ದರು.
ಕಳೆದ ಮೆಗಾ ಹರಾಜಿನಲ್ಲಿ ಮುಂಬೈ ತಂಡ ಮೂಲಬೆಲೆ 30 ಲಕ್ಷ ರೂ.ಗೆ ವಿಘ್ನೇಶ್ರನ್ನು ಖರೀದಿಸಿದ ಬಳಿಕ ದಕ್ಷಿಣ ಆಫ್ರಿಕಾದ ಎಸ್ಎ20 ಲೀಗ್ ವೇಳೆ ಎಂಐ ಕೇಪ್ಟೌನ್ ನಾಯಕ ಹಾಗೂ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಜತೆ ನೆಟ್ಸ್ನಲ್ಲಿ ಬೌಲಿಂಗ್ ಮಾಡುವ ಮತ್ತು ಟಿಪ್ಸ್ ಪಡೆಯುವ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ ನೆಟ್ಸ್ನಲ್ಲಿ ರೋಹಿತ್, ಸೂರ್ಯಕುಮಾರ್, ತಿಲಕ್ ವರ್ಮರಂಥ ಬ್ಯಾಟರ್ಗಳು ವಿಘ್ನೇಶ್ ಎಸೆತಗಳನ್ನು ಎದುರಿಸಲು ಕಷ್ಟಪಟ್ಟಿದ್ದರಿಂದ ಮುಂಬೈ ಮೊದಲ ಪಂದ್ಯದಲ್ಲೇ ಆಡಿಸುವ ಸಾಹಸಕ್ಕೆ ಕೈಹಾಕಿ ಐಪಿಎಲ್ಗೆ ಹೊಸ ಪ್ರತಿಭೆಯೊಂದನ್ನು ಪರಿಚಯಿಸಿದೆ.
ವಿಘ್ನೇಶ್ ರೂಪದಲ್ಲಿ ಮತ್ತೊಬ್ಬ ಪ್ರತಿಭಾವಂತ ಆಟಗಾರನನ್ನು ಪಡೆದ ಫ್ರಾಂಚೈಸಿಯನ್ನು ನೆಟ್ಟಿಗರು ಪ್ರಶಂಸಿಸುತ್ತಿದ್ದಾರೆ. ಈ ಯುವ ಸ್ಪಿನ್ನರ್ ಮುಂಬರುವ ಪಂದ್ಯಗಳಲ್ಲಿ ಮಿಂಚಬೇಕೆಂದು ಅಭಿಮಾನಿಗಳು ಬಯಸುತ್ತಿದ್ದಾರೆ. (ಏಜೆನ್ಸೀಸ್)
LSG ಸೋಲು… ರಾಹುಲ್ ಆಯ್ತು ಇದೀಗ ರಿಷಭ್ ಪಂತ್ಗೂ ತಟ್ಟಿದ ಸಂಜೀವ್ ಗೋಯೆಂಕಾ ಕೋಪದ ಬಿಸಿ! Sanjeev Goenka