ರೈತರ ಎಲ್ಲ ಮಕ್ಕಳಿಗೂ ವಿದ್ಯಾನಿಧಿ: ನಿಯಮ ಮಾರ್ಪಾಡು ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

Vidhanasoudha vvani
Published on

ಬೆಂಗಳೂರು: ರಾಜ್ಯದಲ್ಲಿ ಜಾರಿಗೊಳಿಸಲಾಗಿರುವ ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ನಿಯಮಗಳನ್ನು ಸರ್ಕಾರ ಮಾರ್ಪಾಡುಗೊಳಿಸಿ ರೈತ ಕುಟುಂಬ ಎಲ್ಲ ಮಕ್ಕಳಿಗೂ ವಿದ್ಯಾರ್ಥಿವೇತನ ಲಭ್ಯವಾಗುವಂತೆ ಅವಕಾಶ ಮಾಡಿಕೊಟ್ಟಿದೆ. ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯನ್ನು ಆ.7 ರಂದು ಜಾರಿಗೆ ತರಲಾಗಿತ್ತು. ಆದರೆ, ಯೋಜನೆಯಲ್ಲಿ ಈಗಾಗಲೆ ರಾಜ್ಯ ಸರ್ಕಾರದ ಅನುದಾನದಿಂದ ಯಾವುದಾದರೂ ವಿದ್ಯಾರ್ಥಿ ವೇತನ ಪಡೆಯುತ್ತಿದ್ದರೆ, ಅವರಿಗೆ ರೈತ ವಿದ್ಯಾನಿಧಿ ಸೌಲಭ್ಯ ಸಿಗುತ್ತಿರಲಿಲ್ಲ. ಡಿ.10 ರಂದು ಮಾರ್ಪಾಡು ಆದೇಶ ಹೊರಡಿಸಿರುವ ಸರ್ಕಾರ ರಾಜ್ಯದ ಇ- ಆಡಳಿತ ಇಲಾಖೆ ನಿರ್ವಹಿಸುತ್ತಿರುವ ‘ಕುಟುಂಬ’ ತಂತ್ರಾಂಶದ ದತ್ತಾಂಶದಲ್ಲಿ ದಾಖಲಾಗಿರುವ ಎಲ್ಲ ಸದಸ್ಯರು (ವಿದ್ಯಾರ್ಥಿಯು ಈಗಾಗಲೆ ಯಾವುದೇ ವಿದ್ಯಾರ್ಥಿವೇತನ ಪಡೆಯುತ್ತಿದ್ದರೂ) ರೈತ ವಿದ್ಯಾನಿಧಿಯ ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗಿದ್ದಾರೆ. ರ್ಯಾಂಕ್, ಮೆರಿಟ್, ಶಿಷ್ಯವೇತನ, ಪ್ರಶಸ್ತಿ ಅಥವಾ ಪ್ರತಿಫಲ ಆಧಾರ ದಲ್ಲಿ ಪಡೆಯುವ ವಿದ್ಯಾರ್ಥಿ ವೇತನಕ್ಕೂ ರೈತ ವಿದ್ಯಾನಿಧಿಗೂ ಸಂಬಂಧವಿಲ್ಲ ಎಂದು ತಿಳಿಸಿದೆ.

ಸೆಮಿಸ್ಟರ್ ಅನುತ್ತೀರ್ಣವಾಗಿದ್ದರೂ ವೇತನ: ರೈತ ವಿದ್ಯಾನಿಧಿ ಶಿಷ್ಯವೇತನವು ಶೈಕ್ಷಣಿಕ ಸಾಲಿನಲ್ಲಿ ಯಾವುದೇ ಕೋರ್ಸ್​ನ ಸೆಮಿಸ್ಟರ್ ಅಥವಾ ಶೈಕ್ಷಣಿಕ ವರ್ಷದಲ್ಲಿ ಅನುತ್ತೀರ್ಣ ಹೊಂದಿದಲ್ಲಿ ಅಂತಹ ವಿದ್ಯಾರ್ಥಿಗಳು ಶಿಷ್ಯವೇತನ ಪಡೆಯಲು ಅರ್ಹರಲ್ಲ ಎಂದು ಮೊದಲ ಆದೇಶದಲ್ಲಿತ್ತು. ಹೊಸ ಆದೇಶದಲ್ಲಿ ಷರತ್ತು ಬದಲಾಯಿಸಿ ಶೈಕ್ಷಣಿಕ ದತ್ತಾಂಶಗಳ ಆಧಾರವನ್ನು ಪರಿಗಣಿಸಿ ವಿದ್ಯಾರ್ಥಿ ಅರ್ಜಿ ಸಲ್ಲಿಸುವಿಕೆ ಪರಿಗಣಿಸಿ ವಿದ್ಯಾರ್ಥಿವೇತನ ನೀಡಬೇಕು. ಎಲ್ಲ ವಿದ್ಯಾರ್ಥಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಹಣ ವರ್ಗಾಯಿಸಬೇಕು. ಇನ್ನು ಒಂದಕ್ಕಿಂತ ಹೆಚ್ಚಿನ ತತ್ಸಮಾನ ಪದವಿಗಳನ್ನು (ಎರಡು ಸ್ನಾತಕೋತ್ತರ ಪದವಿ) ಪಡೆಯುತ್ತಿದ್ದರೆ ಅವರಿಗೆ ರೈತ ವಿದ್ಯಾನಿಧಿಯ ವೇತನ ಮೊದಲ ಕೋರ್ಸ್​ಗೆ ಮಾತ್ರ ಲಭ್ಯವಾಗುತ್ತದೆ ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net