

ಭಾರತೀಯ ಸೇನೆಯ ಯೋಧನೋರ್ವ ಮಂಜುಗಡ್ಡೆಯನ್ನೇ ಕಟ್ ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಅವರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನಮ್ಮ ಯೋಧರು ಹಿಮಾಚ್ಛಾದಿತ ಪ್ರದೇಶದಲ್ಲಿ, ಕೊರೆವ ಚಳಿಯಲ್ಲಿ ನಿಂತು ದೇಶ ಕಾಯುತ್ತಾರೆ. ಅದೆಷ್ಟೋ ಮಂದಿ, ಆ ಹಿಮದಡಿಯಲ್ಲಿಯೇ ಪ್ರಾಣವನ್ನೂ ಬಿಟ್ಟ ಉದಾಹರಣೆ ಇದೆ. ಅವರಿಗೆ ಯಾವುದೇ ಹಬ್ಬವಿರಲಿ, ಸಂಭ್ರಮವಿರಲಿ ಅಲ್ಲೇ, ತಾವಿದ್ದಲ್ಲೇ ಎಲ್ಲ ಸೇರಿ ಖುಷಿಯಿಂದ ಆಚರಿಸಿಕೊಳ್ಳುತ್ತಾರೆ.
ಇದೀಗ ಯೋಧನೋರ್ವ ಗಟ್ಟಿಯಾದ ಮಂಜುಗಡ್ಡೆಯನ್ನು ಕೇಕ್ನಂತೆ ಕತ್ತರಿಸಿ ತನ್ನ ಜನ್ಮದಿನ ಆಚರಣೆ ಮಾಡಿಕೊಂಡಿದ್ದಾರೆ. ಅವರೊಂದಿಗೆ ಇನ್ನೂ ನಾಲ್ವರು ಯೋಧರು ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಎಲ್ಲರೂ ಚಪ್ಪಾಳೆ ತಟ್ಟುತ್ತ, ತಮ್ಮ ಸಹೋದ್ಯೋಗಿ ಮಿತ್ರನಿಗೆ ಶುಭ ಕೋರಿದ್ದಾರೆ. ಕೇಕ್ ಕಟ್ ಮಾಡಿದ ಯೋಧ, ನಂತರ ಅದರ ತುಂಡನ್ನು ತನ್ನ ಸ್ನೇಹಿತರಿಗೆ ಕೊಡುವುದನ್ನು ವಿಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ರಾಜಸ್ಥಾನದಲ್ಲಿ ಅಧಿಕಾರ ಹಿಡಿಯುವ ಬಿಜೆಪಿ ಹಾದಿ ಬಹಳ ಕಷ್ಟ, ಕಷ್ಟ
14 ಸೆಕೆಂಡ್ಗಳ ಈ ವಿಡಿಯೋವನ್ನು ಪೋಸ್ಟ್ ಮಾಡಿಕೊಂಡ ವೀರೇಂದ್ರ ಸೆಹ್ವಾಗ್ ಅವರು, ಯೋಧನೋರ್ವ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಚೀಸ್ ಕೇಕ್ನ್ನು ಮರೆತುಬಿಡಿ. ಹಿಮದ ಕೇಕ್ನ ಸೊಗಸು ಯೋಧರಿಗೆ ಮಾತ್ರ ಗೊತ್ತಿರಲು ಸಾಧ್ಯ. ಇವರ ತ್ಯಾಗ ಮತ್ತು ಉತ್ಸಾಹವನ್ನು ಬಣ್ಣಿಸಲು ಪದಗಳೇ ಸಾಕಾಗುವುದಿಲ್ಲ ಎಂದು ಕ್ಯಾಪ್ಷನ್ ಬರೆದಿದ್ದಾರೆ.
ವಿಡಿಯೋ ನೋಡಿದ ನೆಟ್ಟಿಗರೂ ಸಹ ಭಾವನಾತ್ಮಕವಾಗಿ ಕಾಮೆಂಟ್ ಮಾಡಿದ್ದಾರೆ. ಲಕ್ಷಾಂತರ ಮಂದಿ ರೀಟ್ವೀಟ್ ಮಾಡಿಕೊಂಡಿದ್ದಾರೆ.
ಇನ್ನು ನೆಟ್ಟಿಗರೂ ಸಹ ಆ ಯೋಧನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇದು ಹೃದಯ ಸ್ಪರ್ಶಿ ವಿಡಿಯೋ ಎಂದು ಅನೇಕರು ಹೇಳಿದ್ದರು. ಮತ್ತೆ ಅನೇಕರು, ಯೋಧರಿಗೆ ಇಲ್ಲಿಂದಲೇ ಸೆಲ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)