

ಘಾಜಿಯಾಬಾದ್ : ವಿದ್ಯುತ್ ಕಳವು ಮಾಡುತ್ತಿದ್ದ ಉತ್ತರಪ್ರದೇಶದ ನಿವಾಸಿಯೊಬ್ಬ ದಾಳಿಗೆ ಬಂದ ಇಲಾಖಾ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾ, ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾನೆ. ಯಾರಿಗೂ ಗೊತ್ತಾಗದಂತೆ ತಾನು ಅಕ್ರಮವಾಗಿ ಏರ್ಪಡಿಸಿದ್ದ ಕಳ್ಳಸಂಪರ್ಕವನ್ನು ತುಂಡರಿಸಲು ಹೋದ ವಿದ್ಯುತ್ ಕಳ್ಳನ ನಗೆ ತರಿಸುವ ವಿಡಿಯೋ ತುಣುಕು ಜಾಲತಾಣದಲ್ಲಿ ವೈರಲ್ ಆಗಿದೆ.
ಯುಪಿಯ ಘಾಜಿಯಾಬಾದ್ನ ಮುರಾದ್ನಗರ್ ಪ್ರದೇಶದಲ್ಲಿ ಕೆಲವು ನಿವಾಸಿಗಳು ಅಕ್ರಮವಾಗಿ ವಿದ್ಯುತ್ ವೈರ್ಗಳಿಗೆ ಕೇಬಲ್ ಜೋಡಿಸಿ ವಿದ್ಯುತ್ ಕದಿಯುತ್ತಿದ್ದ ಸುಳಿವು ಬಂದಿತ್ತು. ಈ ಮೇರೆಗೆ ವಿದ್ಯುತ್ ಇಲಾಖೆ ಅಧಿಕಾರಿಗಳು ಮನೆಯೊಂದರ ಮೇಲೆ ದಾಳಿ ನಡೆಸಲು ಬಂದರು. ಹೀಗೆ ಮನೆ ಬಾಗಿಲಿಗೆ ಬಂದು ನಿಂತ ಅಧಿಕಾರಿಗಳಿಗೆ ಕದ ತೆರೆಯದೆ, ನಿವಾಸಿಯೊಬ್ಬ ಮೆಲ್ಲಗೆ ಟೆರೇಸ್ ಮೇಲೆ ಹೋಗಿ, ತೆವಳುತ್ತಾ, ತಾನು ಜೋಡಿಸಿಟ್ಟಿದ್ದ ಕಳ್ಳ ಸಂಪರ್ಕವನ್ನು ತುಂಡರಿಸಲು ಪ್ರಯತ್ನಿಸಿದ.
ಆದರೆ, ಇಲಾಖೆಯ ಲೈನ್ಮನ್ ಒಬ್ಬರು ಒಂದು ಹೆಜ್ಜೆ ಮುಂದಾಗಿ, ಪಕ್ಕದ ಮನೆಯ ಟೆರೇಸಿನಿಂದ ಬಂದು ವಿಡಿಯೋ ಮಾಡುತ್ತಿದ್ದುದು ಆತನಿಗೆ ಗೊತ್ತಿರಲಿಲ್ಲ. ವಿದ್ಯುತ್ ಕಳ್ಳನು ತನ್ನ ಕಳ್ಳತನದ ಪುರಾವೆಯನ್ನು ನಾಶಪಡಿಸಿ ಪಾರಾಗುವ ಪ್ರಯತ್ನದಲ್ಲಿದ್ದಾಗ, ಅವನನ್ನು ರೆಡ್ ಹ್ಯಾಂಡೆಡ್ ಆಗಿ ಹಿಡಿದ ಲೈನ್ಮನ್, 'ನಾನು ಇಲ್ಲೇ ನಿಂತಿದ್ದೇನಪ್ಪ' ಎಂದು ಹಿಂದಿ ಭಾಷೆಯಲ್ಲಿ ಉದ್ಗರಿಸುವುದು ವಿಡಿಯೋದಲ್ಲಿ ಕೇಳಿಬಂದಿದೆ. (ಏಜೆನ್ಸೀಸ್)