

ಮುಂಬೈ: ನಾಳೆಯಿಂದ ನವರಾತ್ರಿ ಆರಂಭವಾಗಲಿದ್ದು, ಎಲ್ಲೆಡೆ ಸಿದ್ಧತೆ ಕಂಡುಬರುತ್ತಿದೆ. ಕೆಲವೆಡೆ ಮಾತೆಯ ವಿಗ್ರಹ ಪ್ರತಿಷ್ಠಾಪಿಸಲು ಸಿದ್ಧತೆ ನಡೆಸಿದರೆ, ಇನ್ನು ಕೆಲವೆಡೆ ಗಾರ್ಬೋ ನೃತ್ಯ ಮಾಡಲು ಡೆಕೊರೇಟ್ ಮಾಡಲಾಗುತ್ತಿದೆ.
ಗಾರ್ಬೋ ಸಾಂಗ್ ನವರಾತ್ರಿಯಿಂದ ಆರಂಭವಾಗಲಿದೆ. ಈ ವಿಶೇಷ ಸಂದರ್ಭದಲ್ಲಿ, ಜಾಕಿ ಭಗ್ನಾನಿ ಅವರ ಡೈನಾಮಿಕ್ ಮ್ಯೂಸಿಕ್ ಲೇಬಲ್ ಜುಸ್ಟ್ ಮ್ಯೂಸಿಕ್ ಪ್ರಧಾನಿ ನರೇಂದ್ರ ಮೋದಿ ಬರೆದಿರುವ ಗಾರ್ಬೋ ಹಾಡಿನ ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ಹಾಡನ್ನು ಧ್ವನಿ ಭಾನುಶಾಲಿ ಹಾಡಿದ್ದಾರೆ ಮತ್ತು ತನಿಷ್ಕ್ ಬಾಗ್ಚಿ ಸಂಯೋಜಿಸಿದ್ದಾರೆ. ಇದೀಗ ಪ್ರಧಾನಿ ಮೋದಿ ಕೂಡ ಟ್ವೀಟ್ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ಮೋದಿಯವರ ಕವನದಿಂದ ಸ್ಫೂರ್ತಿ
ನಟ ಜಾಕಿ ಭಗ್ನಾನಿ ಪ್ರಕಾರ, ಈ ಹಾಡು ನವರಾತ್ರಿ ಹಬ್ಬಕ್ಕೆ ವಿಭಿನ್ನ ವಾತಾವರಣ ಸೃಷ್ಟಿಸುತ್ತಿದೆ. ಹಾಡನ್ನು ಪಿಎಂ ನರೇಂದ್ರ ಮೋದಿಯವರ ಕವನದಿಂದ ಸ್ಫೂರ್ತಿ ಪಡೆದು ಸಿದ್ಧಪಡಿಸಲಾಗಿದೆ. ಪ್ರಧಾನಿಯವರು ಬರೆದಿರುವ ಈ ಹಾಡು ನವರಾತ್ರಿ ಹಬ್ಬದ ಬಗ್ಗೆಯಿದೆ. ಇದು ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿವಿಧ ರಾಜ್ಯಗಳ ಜನರನ್ನು ಒಂದುಗೂಡಿಸುತ್ತದೆ.
ಸಂತೋಷದ ಕ್ಷಣ
ಈ ಹಾಡಿನ ಕುರಿತು ಮಾತನಾಡಿದ ಜಾಕಿ ಭಗ್ನಾನಿ, ಈ ಸಂಗೀತ ಯೋಜನೆಯ ಭಾಗವಾಗಲು ನನಗೆ ತುಂಬಾ ಹೆಮ್ಮೆ ಮತ್ತು ಸಂತೋಷವಾಗಿದೆ. ಗಾರ್ಬೋ ಹಾಡಿನಲ್ಲಿ ನಮ್ಮ ಸಾಂಸ್ಕೃತಿಕ ಮತ್ತು ನವರಾತ್ರಿಯ ಭಾವಗಳು ಕಾಣಸಿಗುತ್ತವೆ. ಇದರೊಂದಿಗೆ ಈ ಹಾಡಿನಲ್ಲಿರುವ ಸಂಗೀತದ ಶಕ್ತಿಯೂ ನಿಮಗೆ ತಿಳಿಯುತ್ತದೆ.
ಧ್ವನಿ ಭಾನುಶಾಲಿ ಟ್ವೀಟ್
ಈ ಹಾಡನ್ನು ಹಾಡಿದ ಧ್ವನಿ ಭಾನುಶಾಲಿ ಟ್ವೀಟ್ ಮಾಡಿ, 'ನರೇಂದ್ರ ಮೋದಿ ಜಿ, ತನಿಷ್ಕ್ ಬಾಗ್ಚಿ ಮತ್ತು ನಾನು ನೀವು ಬರೆದಿರುವ ಗಾರ್ಬೋ ಹಾಡನ್ನು ತುಂಬಾ ಇಷ್ಟಪಟ್ಟಿದ್ದೇವೆ. ತಾಜಾ ಲಯ ಮತ್ತು ಸಂಯೋಜನೆಯೊಂದಿಗೆ ಹಾಡನ್ನು ರಚಿಸಲು ನಾವು ಬಯಸಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಟ್ವೀಟ್
ಧ್ವನಿ ಭಾನುಶಾಲಿಯನ್ನು ಟ್ಯಾಗ್ ಮಾಡಿ ಪ್ರಧಾನಿ ನರೇಂದ್ರ ಮೋದಿ, 'ವರ್ಷಗಳ ಹಿಂದೆ ನಾನು ಬರೆದ ಗಾರ್ಬೋ ಈ ಸುಂದರ ನಿರೂಪಣೆಗೆ ಧನ್ಯವಾದಗಳು. ಇದು ಅನೇಕ ನೆನಪುಗಳನ್ನು ತರುತ್ತದೆ. ನಾನು ಹಲವು ವರ್ಷಗಳಿಂದ ಏನನ್ನೂ ಬರೆದಿಲ್ಲ, ಆದರೆ ಕಳೆದ ಕೆಲವು ದಿನಗಳಲ್ಲಿ ನಾನು ಹೊಸ ಗಾರ್ಬೋ ಬರೆಯುವಲ್ಲಿ ಯಶಸ್ವಿಯಾಗಿದ್ದೇನೆ, ಅದನ್ನು ನಾನು ನವರಾತ್ರಿಯಲ್ಲಿ ಹಂಚಿಕೊಳ್ಳುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.