

ಪಟ್ನಾ: 'ಯಾರೇ ಕೂಗಾಡಲಿ, ಊರೇ ಹೋರಾಡಲಿ ನಿನ ನೆಮ್ಮದಿಗೆ ಭಂಗವಿಲ್ಲ! ಎಮ್ಮೇ... ನಿನಗೆ ಸಾಟಿ ಇಲ್ಲ' ಎಂದು ಡಾ. ರಾಜ್ಕುಮಾರ್ ಅವರು ಚಿತ್ರದಲ್ಲಿ ಹಾಡಿ ಕುಣಿದಿದ್ದು ನೀವು ನೋಡಿದ್ದೀರಿ. ಈಗ ಇಂಧನಗಳ ಬೆಲೆ ಹೆಚ್ಚಾಗಿದೆ ಎನ್ನುತ್ತಾ ರಾಜಕಾರಣಿ ಒಬ್ಬರು, ಎಮ್ಮೆಯ ಸವಾರಿ ಮಾಡಿಕೊಂಡು ಚುನಾವಣಾ ಕಣ ಪ್ರವೇಶಿಸಿರುವುದನ್ನು ನೋಡಿ!
ಹೌದು! ಪಂಚಾಯತಿ ಚುನಾವಣೆ ಅಭ್ಯರ್ಥಿಯೊಬ್ಬರು, ಎಮ್ಮೆಯ ಮೇಲೆ ಕುಳಿತುಕೊಂಡು ಬಂದು ನಾಮಪತ್ರ ಸಲ್ಲಿಸಿರುವ ಕುತೂಹಲಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಕಟಿಹಾರ್ ಜಿಲ್ಲೆಯ ರಾಮಪುರ ಪಂಚಾಯತ್ ಸದಸ್ಯನಾಗಲು ಬಯಸಿರುವ ಆಜಾದ್ ಅಲಂ ಎಂಬುವರೇ ಈ ಅಭ್ಯರ್ಥಿ.
ಹಲವಾರು ಸಮರ್ಥಕರೊಂದಿಗೆ ರಸ್ತೆಯಲ್ಲಿ ಎಮ್ಮೆಯ ಮೇಲೆ ಕುಳಿತು ಮೆರವಣಿಗೆ ಬಂದ ಅಲಂ ಅವರು, "ನಾನು ಗೋವುಗಳನ್ನು ಸಾಕುವವನು. ನನಗೆ ಪೆಟ್ರೋಲ್ ಅಥವಾ ಡೀಸೆಲ್ ಬೆಲೆ ತೆರಲು ಸಾಧ್ಯವಿಲ್ಲ. ಅದಕ್ಕೇ ಎಮ್ಮೆಯ ಮೇಲೆ ಬಂದಿದ್ದೇನೆ" ಎಂದು ಹೇಳಿದ್ದಾರೆಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಾಜ್ಯದಲ್ಲಿ ಪಂಚಾಯಿತಿ ಚುನಾವಣೆಗಳ ಪ್ರಕ್ರಿಯೆ ಆರಂಭವಾಗಿದ್ದು, ಸೆಪ್ಟೆಂಬರ್ 24 ರಿಂದ ಡಿಸೆಂಬರ್ 12 ರವರೆಗೆ 11 ಹಂತಗಳಲ್ಲಿ ಮತದಾನ ನಡೆಯಲಿದೆ. (ಏಜೆನ್ಸೀಸ್)