

ಕೊಚ್ಚಿ: ಕಣ್ಣೂರು ಪೊಲೀಸ್ ಠಾಣೆಯ ಪೊಲೀಸರು ಬೀದಿಬದಿ ವ್ಯಾಪಾರಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ದುರ್ವತನೆ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಮೊದಲೇ ಕರೊನಾದಿಂದ ಆರ್ಥಿಕವಾಗಿ ನಲುಗಿರುವ ಜನರು ಮತ್ತೆ ತಮ್ಮ ಜೀವನವನ್ನು ಹಳಿಗೆ ತರಲು ಶ್ರಮ ಪಡುತ್ತಿರುವ ನಡುವೆಯೇ ಪೊಲೀಸರ ದರ್ಪ ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ.
ಕಣ್ಣೂರು ನಿವಾಸಿ ಸಾಜಿದ್ ಜತೆ ಪೊಲೀಸರು ಅನುಚಿತವಾಗಿ ನಡೆದುಕೊಂಡಿದ್ದಾರೆ. ಇಲ್ಲಿಂದ ಜಾಗ ಖಾಲಿ ಮಾಡಿ ಎಂದಿದ್ದಕ್ಕೆ ಅದನ್ನು ನಿರಾಕರಿಸಿದ ಸಾಜಿದ್ ವಿರುದ್ಧ ಕಿಡಿಕಾರಿದ ಪೊಲೀಸ್, ಏರು ಧ್ವನಿಯಲ್ಲಿ ಮಾತನಾಡುತ್ತಾ, ಹಣ್ಣುಗಳು ತುಂಬಿದ ಸಾಜಿದ್ ಅವರ ತಳ್ಳುವ ಗಾಡಿಗೆ ಜಾಡಿಸಿ ಒದೆಯುತ್ತಾರೆ. ಇದರಿಂದ ಹಣ್ಣುಗಳು ನೆಲಕ್ಕೆ ಚೆಲ್ಲುತ್ತವೆ. ಪೊಲೀಸರ ದುರ್ವರ್ತನೆಯ ಈ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್ನಲ್ಲಿ ರೆಕಾರ್ಡ್ ಆಗಿದ್ದು, ಇದೀಗ ವೈರಲ್ ಆಗಿದೆ.
ಇತ್ತ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಸಾಜಿದ್ಗೆ ಮತ್ತಷ್ಟು ಕಿರುಕುಳ ನೀಡಲು ಆರಂಭಿಸಿದ್ದಾರೆ. ಶುಕ್ರವಾರ ಸಂಜೆ ಸಾಜಿದ್ ಮೊಬೈಲ್ ಫೋನ್ ಅನ್ನು ವಶ ಪಡೆದುಕೊಂಡು ತೊಂದರೆ ಕೊಟ್ಟಿದ್ದಾರೆ. ಠಾಣೆಗೂ ಕರೆದೊಯ್ದು ಶನಿವಾರ ಬಿಟ್ಟು ಕಳುಹಿಸಿದ್ದಾರೆ. ಈ ವೇಳೆ ಇನ್ನೆಂದಿಗೂ ನೀನು ಮಾರುಕಟ್ಟೆಯಲ್ಲಿ ಹಣ್ಣುಗಳನ್ನು ಮಾರಾಟ ಮಾಡಬೇಡ. ಆಗೊಂದು ವೇಳೆ ಮಾರಾಟ ಮಾಡಿದ್ದಲ್ಲಿ ಮತ್ತಷ್ಟು ತೊಂದರೆಯನ್ನು ಎದುರಿಸಬೇಕಾಗುತ್ತದೆ ಎಂದು ಧಮ್ಕಿ ಹಾಕಿದ್ದಾರೆ. ಅಲ್ಲದೆ, ಕೆಟ್ಟ ಪದಗಳಿಂದ ನಿಂದಿಸಿದ್ದಾರೆ.
ವಿಡಿಯೋ ನೋಡಿದ ಸ್ಥಳೀಯ ಶಾಸಕರೊಬ್ಬರು ಪೊಲೀಸ್ ಅಧಿಕಾರಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇತ್ತ 10 ವರ್ಷಗಳಿಂದ ಮಾರುಕಟ್ಟೆಯಲ್ಲಿ ಹಣ್ಣು ಮಾರಾಟ ಮಾಡಿಕೊಂಡು ಬರುತ್ತಿರುವ ಸಾಜಿದ್ಗೆ ಪೊಲೀಸರ ದುರ್ವತನೆ ಆತಂಕಕ್ಕೆ ದೂಡಿದೆ. ನನಗೆ ಬೇರೆ ಕೆಲಸ ಮಾಡಲು ತಿಳಿದಿಲ್ಲ. ಈ ಕೆಲಸವನ್ನೇ ಮಾಡಿಕೊಂಡು ಹೋಗುತ್ತೇನೆಂದು ಪೊಲೀಸರ ಬಳಿ ಕೇಳಿಕೊಂಡರು ಅದನ್ನು ಕೇಳಿಸಿಕೊಳ್ಳುವ ವ್ಯವಧಾನವೂ ಪೊಲೀಸರ ಬಳಿ ಇರಲಿಲ್ಲ. ಅಲ್ಲದೆ, ಈ ವಿಚಾರವಾಗಿ ಸ್ಥಳೀಯ ಮಾಧ್ಯಮಗಳು ಪೊಲೀಸ್ ಅಧಿಕಾರಿಯನ್ನು ಭೇಟಿ ಮಾಡಿದಾಗ ಮಾತನಾಡಲು ನಿರಾಕರಿಸಿದ್ದಾರೆ. (ಏಜೆನ್ಸೀಸ್)