

Team India : ಪಾಕಿಸ್ತಾನ ಕ್ರಿಕೆಟ್ ಮಂಡಳಿ ಏಷ್ಯಾ ಕಪ್-2025 ಟೂರ್ನಿಗೆ ಭಾರಿ ಸಿದ್ಧತೆ ನಡೆಸುತ್ತಿದೆ. ಈ ಟೂರ್ನಿಯ ಅಂಗವಾಗಿ ಮೊದಲ ಹೆಜ್ಜೆ ಇಟ್ಟಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) 17 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ತಂಡದ ನಾಯಕನಾಗಿ ಸಲ್ಮಾನ್ ಅಲಿ ಅಘಾ ಅವರನ್ನು ಆಯ್ಕೆ ಮಾಡಲಾಗಿದೆ. ಅದೇ ರೀತಿ, ಆಯ್ಕೆದಾರರು ಸ್ಟಾರ್ ಆಟಗಾರರಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ತಂಡದಿಂದ ಕೈಬಿಟ್ಟಿದ್ದಾರೆ.
ತಂಡದ ಘೋಷಣೆಯ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ತಂಡದ ಉನ್ನತ ಪ್ರದರ್ಶನ ನಿರ್ದೇಶಕ ಆಕಿಬ್ ಜಾವೇದ್ ಪತ್ರಿಕಾಗೋಷ್ಠಿಯಲ್ಲಿ ಕೆಲವು ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ. ಈ ಬಾರಿ ಏಷ್ಯಾಕಪ್‌ನಲ್ಲಿ ಭಾರತ ತಂಡವನ್ನು ಸೋಲಿಸುವ ಸಾಮರ್ಥ್ಯವನ್ನು ಪಾಕಿಸ್ತಾನ ಹೊಂದಿದೆ ಎಂದು ಜಾವೇದ್ ಹೇಳಿದ್ದಾರೆ. ಅಲ್ಲದೆ. ಟೀಮ್ ಇಂಡಿಯಾ ಒಡ್ಡುವ ಸವಾಲಿಗೆ ತಂಡದ ಪ್ರತಿಯೊಬ್ಬ ಆಟಗಾರನೂ ಸಿದ್ಧರಿದ್ದಾರೆ ಎಂದಿದ್ದಾರೆ.
ಭಾರತವು ಪಾಕಿಸ್ತಾನ ವಿರುದ್ಧ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅದ್ಭುತ ದಾಖಲೆಯನ್ನು ಹೊಂದಿದೆ. ಆದರೆ, ಪಾಕಿಸ್ತಾನವು 2022ರ ಏಷ್ಯಾಕಪ್‌ನಲ್ಲಿ ತನ್ನ ಯಶಸ್ಸನ್ನು ಪುನರಾವರ್ತಿಸಲು ನೋಡುತ್ತಿದೆ. ಇಲ್ಲಿಯವರೆಗೆ, ಎರಡೂ ತಂಡಗಳು 13 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ ಒಂಬತ್ತು ಪಂದ್ಯಗಳಲ್ಲಿ ಗೆದ್ದಿದ್ದರೆ, ಪಾಕಿಸ್ತಾನ ಮೂರರಲ್ಲಿ ಗೆದ್ದಿದೆ. ಪಾಕಿಸ್ತಾನ ಕೊನೆಯ ಬಾರಿಗೆ 2022 ರ ದುಬೈನಲ್ಲಿ ನಡೆದ ಏಷ್ಯಾಕಪ್ ಸೂಪರ್ ಫೋರ್‌ನಲ್ಲಿ ಭಾರತವನ್ನು ಟಿ20ಐನಲ್ಲಿ ಸೋಲಿಸಿತು.
ಭಾರತ-ಪಾಕಿಸ್ತಾನ ಪಂದ್ಯಗಳ ವಿಷಯಕ್ಕೆ ಬಂದಾಗ ಭಾರಿ ನಿರೀಕ್ಷೆಗಳಿವೆ. ಆದರೆ, ನಾವು ಆಯ್ಕೆ ಮಾಡಿರುವ ಈ 17 ಸದಸ್ಯರ ತಂಡವು ಯಾವುದೇ ತಂಡವನ್ನು ಸೋಲಿಸಬಲ್ಲದು. ಆದರೆ, ನಾವು ಅವರ ಮೇಲೆ ಯಾವುದೇ ಒತ್ತಡ ಹೇರುತ್ತಿಲ್ಲ. ಈ ತಂಡದ ಮೇಲೆ ನನಗೆ ತುಂಬಾ ನಂಬಿಕೆ ಇದೆ. ನಾವು ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಸಂಪೂರ್ಣವಾಗಿ ಹೊರಗಿಟ್ಟಿಲ್ಲ. ಪ್ರಸ್ತುತ ಪ್ರದರ್ಶನದ ಆಧಾರದ ಮೇಲೆ ನಾವು ಆಟಗಾರರನ್ನು ಆಯ್ಕೆ ಮಾಡಿದ್ದೇವೆ ಎಂದು ಜಾವೇದ್ ಸ್ಪಷ್ಟನೆ ನೀಡಿದರು.
ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್ ಮತ್ತು ಫಖರ್ ಜಮಾನ್ ಅವರಂತಹ ಆಟಗಾರರು ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕಾಗಿಯೇ ನಾವು ಅವರನ್ನು ತಂಡದಲ್ಲಿಯೇ ಉಳಿಸಿಕೊಂಡಿದ್ದೇವೆ. ಸೈಮ್ ಅವರ ಮರು ಪ್ರವೇಶದಲ್ಲಿ ಸ್ವಲ್ಪ ತೊಂದರೆ ಅನುಭವಿಸಿದರು. ಆದರೆ, ಆನಂತರ ಅವರು ತಮ್ಮ ಲಯವನ್ನು ಪಡೆದುಕೊಂಡರು. ತಂಡಕ್ಕೆ ಮರಳಲು ಪ್ರತಿಯೊಬ್ಬ ಆಟಗಾರನಿಗೂ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಆದರೆ, ಯಾರು ಉತ್ತಮವಾಗಿ ಪ್ರದರ್ಶನ ನೀಡುತ್ತಾರೆ, ಅವರು ಖಂಡಿತವಾಗಿಯೂ ತಂಡದಲ್ಲಿ ಇರುತ್ತಾರೆ. ಅವರು ಪಾಕಿಸ್ತಾನ ಪರ ಆಡಲು ಅರ್ಹರು ಎಂದು ಜಾವೇದ್ ಹೇಳಿದರು.
ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲಾತ್, ಖುಶ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಸೀಮ್ ಜೂನಿಯರ್, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಸಲ್ಮಾನ್ ಮಿರ್ಜಾ, ಶಾಹೀನ್ ಶಾ ಅಫ್ರಿದಿ ಮತ್ತು ಸುಫ್ಯಾನ್ ಮೋಕಿಮ್.