'ಸಾಕ್ಷಾತ್ಕಾರ' ಖ್ಯಾತಿಯ ಹಿರಿಯ ನಟಿ ಜಮುನಾ ನಿಧನ …

Jamuna - Final
Published on

ಹೈದರಾಬಾದ್​: ಕನ್ನಡ ಚಿತ್ರರಂಗದ ಎವರ್​ಗ್ರೀನ್​ ಹಾಡಾದ 'ಸಾಕ್ಷಾತ್ಕಾರ' ಚಿತ್ರದ 'ಒಲವೇ ಜೀವನ ಸಾಕ್ಷಾತ್ಕಾರ, ಒಲವೇ ಮರೆಯದ ಮಮಕಾರ ...' ಹಾಡಿನಲ್ಲಿ ಅಭಿನಯಿಸಿ, ಕನ್ನಡಿಗರ ಮನಸ್ಸುಗಳಲ್ಲಿ ಹಸಿರಾಗಿರುವ ಹಿರಿಯ ನಟಿ ಜಮುನಾ (87), ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಮೂಲತಃ ಕರ್ನಾಟಕದ ಹಂಪಿಯವರಾದ ಜಮುನಾ, ಚಿಕ್ಕ ವಯಸ್ಸಿನಲ್ಲೇ ಆಂಧ್ರಕ್ಕೆ ವಲಸೆ ಹೋದವರು. ಶಾಲಾ ಕಾರ್ಯಕ್ರಮವೊಂದರಲ್ಲಿ ಅವರನ್ನು ನೋಡಿದ ಗರಿಕಿಪಾಟಿ ರಾಜಾ ರಾವ್​, ತಮ್ಮ ಚಿತ್ರದಲ್ಲಿ ನಟಿಸುವುದಕ್ಕೆ ಅವಕಾಶ ನೀಡಿದರು. 1952ರಲ್ಲಿ ಬಿಡುಗಡೆಯಾದ 'ಪುಟ್ಟಿಲು' ಎಂಬ ಚಿತ್ರದ ಮೂಲಕ ನಾಯಕಿಯಾದ ಅವರಿಗೆ ದೊಡ್ಡ ಬ್ರೇಕ್​ ಸಿಕ್ಕಿದ್ದು 'ಮಿಸ್ಸಮ್ಮ' ಚಿತ್ರದ ಮೂಲಕ. ಈ ಚಿತ್ರದಲ್ಲಿ ಎನ್​.ಟಿ. ರಾಮರಾವ್​, ಸಾವಿತ್ರಿ, ಅಕ್ಕಿನೇನಿ ನಾಗೇಶ್ವರ ರಾವ್​ ಮುಂತಾದ ದಿಗ್ಗಜ ಕಲಾವಿದರೊಂದಿಗೆ ನಟಿಸಿದ ಜಮುನಾ, ಮತ್ತೆಂದೂ ತಿರುಗಿ ನೋಡಲಿಲ್ಲ. ಅಲ್ಲಿಂದ ಇಲ್ಲಿಯವರೆಗೂ ಐದು ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

1955ರಲ್ಲಿ ಬಿಡುಗಡೆಯಾದ 'ಆದರ್ಶ ಸತಿ' ಚಿತ್ರದ ಮೂಲಕ ಕನ್ನಡಕ್ಕೆ ಬಂದ ಅವರು, ನಂತರದ ದಿನಗಳಲ್ಲಿ 'ಭೂಕೈಲಾಸ', 'ರತ್ನಗಿರಿ ರಹಸ್ಯ', 'ಸಾಕ್ಷಾತ್ಕಾರ', 'ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು ಮತ್ತು ಕನ್ನಡವಲ್ಲದೆ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ನಟಿಸಿದ್ದಾರೆ.

ನಟನೆಯಲ್ಲದೆ ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದ ಅವರು, ಕಳೆದ ಕೆಲವು ವರ್ಷಗಳಿಂದಚಿತ್ರರಂಗ ಮತ್ತು ರಾಜಕೀಯಗಳೆರಡರಿಂದಲೂ ದೂರವೇ ಇದ್ದರು. ಇತ್ತೀಚಿನ ದಿನಗಳಲ್ಲಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಶುಕ್ರವಾರ ನಿಧನರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net