'2023 ಅವರಿಗೆ ಅತ್ಯುತ್ತಮ ವರ್ಷವಾಗಿತ್ತು'; ಸ್ಟಾರ್​ ಕ್ರಿಕೆಟಿಗನ ಬಗ್ಗೆ ವೆಂಕಟೇಶ್ ಪ್ರಸಾದ್ ಗುಣಗಾನ

ವಿಜಯವಾಣಿ - 2023-12-31T155217.959
Published on

ಬೆಂಗಳೂರು: ಹೊಸ ವರ್ಷ ಸಮೀಪಿಸುತ್ತಿರುವ ಬೆನ್ನಲ್ಲೇ 2023ರನ್ನು ಮೆಲುಕು ಹಾಕಿದ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ಭಾರತ ತಂಡದ ಬಲಗೈ ಸ್ಟಾರ್ ಬ್ಯಾಟ್ಸ್​ಮನ್, ಮಾಜಿ ನಾಯಕನ ಬಗ್ಗೆ ಮೆಚ್ಚಿ ಮಾತನಾಡಿದ್ದು, ಅವರಿಗೆ 2023 ಅತ್ಯುತ್ತಮ ವರ್ಷವಾಗಿತ್ತು ಎಂದು ಹೇಳಿದ್ದಾರೆ. ಅಷ್ಟಕ್ಕೂ ಪ್ರಸಾದ್​ ಹೇಳಿದ್ದು ಯಾರಿಗೆ? ಯಾವ ಸ್ಟಾರ್ ಆಟಗಾರನಿಗೆ? ಇಲ್ಲಿದೆ ನೋಡಿ ಮಾಹಿತಿ.

ಪ್ರಪಂಚದಾದ್ಯಂತ ಹೊಸ ವರ್ಷವನ್ನು ಸ್ವಾಗತಿಸಲು ಜನರು ತುದಿಗಾಲಿನಲ್ಲಿ ನಿಂತಿದ್ದು, ಈ ವೇಳೆ ಟ್ವೀಟ್ ಮುಖೇನ ತಮ್ಮ ಅನಿಸಿಕೆ ಹೊರಹಾಕಿದ ವೆಂಕಟೇಶ್​ ಪ್ರಸಾದ್, ಟೀಮ್ ಇಂಡಿಯಾದ ರನ್​ ಮಷಿನ್​ ವಿರಾಟ್ ಕೊಹ್ಲಿ ಅವರನ್ನು ಹೊಗಳಿದ್ದಾರೆ. ವಿರಾಟ್ ಚಾಂಪಿಯನ್ ಎಂದ ಪ್ರಸಾದ್, 2023 ಅವರಿಗೆ ಅತ್ಯುತ್ತಮ ವರ್ಷವಾಗಿದೆ ಎಂದು ಹೇಳಿದ್ದಾರೆ.

"2023ರಲ್ಲಿ ಕೊಹ್ಲಿ ಆಟದ ಎಲ್ಲಾ ಫಾರ್ಮೆಟ್​ಗಳಲ್ಲಿ 2048 ರನ್ ಗಳಿಸಿದ್ದು, 2154 ರನ್ ಗಳಿಸಿದ ಶುಭಮನ್ ಗಿಲ್ ನಂತರ ರನ್​ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 2023ರ ಏಕದಿನ ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕೊಹ್ಲಿ, 765 ರನ್ ಗಳಿಸುವ ಮುಖೇನ ಮಾಸ್ಟರ್​ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು. ಈ ವರ್ಷದಲ್ಲಿ, ಕೊಹ್ಲಿ ಏಕದಿನದಲ್ಲಿ 50 ಶತಕಗಳ ಮೈಲಿಗಲ್ಲನ್ನು ತಲುಪಿದರು" ಎಂದರು.

"ತಾನು ಚಾಂಪಿಯನ್ ಮತ್ತು ಈ ಪೀಳಿಗೆಯ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂಬುದನ್ನು ವಿರಾಟ್​ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ" ಎಂದು ವೆಂಕಟೇಶ್ ಪ್ರಸಾದ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಭಾರತ ತಂಡ ತನ್ನ ಮುಂದಿನ ಟೆಸ್ಟ್ ಪಂದ್ಯವನ್ನು ಆಡಲು ಇದೀಗ ದಕ್ಷಿಣ ಆಫ್ರಿಕಾಗೆ ತೆರಳಿದ್ದು, ಹೊಸ ವರ್ಷದ ನಂತರ ಕೇಪ್ ಟೌನ್‌ನಲ್ಲಿ ಹರಿಣಿಗಳನ್ನು ಎದುರಿಸಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net