ವೀರಶೈವ-ಲಿಂಗಾಯತರಲ್ಲಿ ಭಿನ್ನಾಭಿಪ್ರಾಯ ಬೇಡ; ಅಕ್ಕ ಸಮ್ಮೇಳನದಲ್ಲಿ ಮಾಜಿ ಸಚಿವೆ ರಾಣಿ ಸತೀಶ್ ಕರೆ

Rani Sathish
Published on

ಅಮೆರಿಕ: ವೀರಶೈವ-ಲಿಂಗಾಯತರು ತಮ್ಮ ಅನೇಕ ಒಳ ಉಪಪಂಗಡಗಳಲ್ಲಿ ವಿಂಗಡನೆಯಾಗಬಾರದು. ಇಷ್ಟಲಿಂಗಾರ್ಚನೆಯನ್ನು ಕೇಂದ್ರೀಕರಿಸಿ ಧರ್ಮ ಸಿದ್ಧಾಂತಗಳನ್ನು ಮುಕ್ತವಾಗಿ ಅವಲೋಕ ಮಾಡಬೇಕು. ವೀರಶೈವ-ಲಿಂಗಾಯತರಲ್ಲಿ ಭಿನ್ನಾಭಿಪ್ರಾಯ ಮರೆಯಾಗಿ ಒಗ್ಗಟ್ಟಿನ ಬದ್ಧತೆ ಬರುವ ತೀವ್ರ ಅಗತ್ಯವಿದೆ ಎಂದು ಮಾಜಿ ಸಚಿವೆ ರಾಣಿ ಸತೀಶ್ ಹೇಳಿದರು.

ಅಮೇರಿಕದಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ವರ್ಜೀನಿಯಾ ರಾಜ್ಯದ ರಿಚ್ಮಂಡ್ ನಗರದಲ್ಲಿ ಅಲ್ಲಿಯ ಕಾವೇರಿ ಮತ್ತು ರಿಚ್ಮಂಡ್ ಕನ್ನಡ ಸಂಘಟನೆಗಳ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 12ನೆಯ ಅಕ್ಕ ಸಮ್ಮೇಳನದ ಅಂಗವಾಗಿ ಜರುಗಿದ ಚಿಂತನಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ವೀರಶೈವ-ಲಿಂಗಾಯತರ ಅನೇಕ ಒಳ ಉಪಪಂಗಡಗಳನ್ನು ಮುನ್ನೆಲೆಗೆ ತಂದು ಮೀಸಲಾತಿ ಹೋರಾಟಗಳನ್ನೂ ಸಹ ಈಗ ನಡೆಸಲಾಗುತ್ತಿದೆ. ಇದರಿಂದಾಗಿ ವೀರಶೈವ-ಲಿಂಗಾಯತ ಧರ್ಮದ ಯುವಕ-ಯುವತಿಯರು ವ್ಯಾಪಕ ಗೊಂದಲಗಳಲ್ಲಿ ಸಿಲುಕಿದ್ದಾರೆ. ಸಂಶೋಧನೆಯ ಎಲ್ಲ ಆಯಾಮಗಳ ನೆಲೆಯಲ್ಲಿ ಧರ್ಮದ ಚಾರಿತ್ರಿಕ ಘನತೆಯನ್ನು ಎಲ್ಲರೂ ಅರಿಯಬೇಕು. ರಾಜಕಾರಣಿಗಳೂ ಸಹ ಧರ್ಮದ ವಿಚಾರಗಳಲ್ಲಿ ತಮಗೆ ಅನುಕೂಲವಾಗುವಂತೆ ವಿಭಜನೆಯ ಮಾತುಗಳನ್ನು ವ್ಯಕ್ತಪಡಿಸಬಾರದು. ಎಲ್ಲರೂ ಸೇರಿಕೊಂಡು ಸಾಮರಸ್ಯದ ನೆಲೆಯಲ್ಲಿ ಧರ್ಮದ ವಿಶಾಲ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ವೀರಶೈವದ ಪ್ರಾಚೀನತೆ

ಹರಪ್ಪ-ಮೊಹೆಂಜೊದಾರೋ ಸಂಸ್ಕೃತಿಯ ಉತ್ಖನನದಲ್ಲಿ ಶಿವಲಿಂಗಗಳ ಜೊತೆಗೆ ಧಾರಣೆಗೆ ಅನುಕೂಲವಾದ ಚಿಕ್ಕ ಗಾತ್ರದ ಲಿಂಗಗಳೂ ದೊರೆತಿರುವುದರಿಂದ ಸಿಂಧೂಬಯಲಿನ ನಾಗರಿಕತೆಯಲ್ಲಿ ಶಿವನ ಆರಾಧಕರಾಗಿದ್ದವರೆಲ್ಲರೂ ಬಹುತೇಕ ವೀರಶೈವ-ಲಿಂಗಾಯತ ಧರ್ಮ-ಸಂಸ್ಕೃತಿಯನ್ನು ಪರಿಪಾಲನೆ ಮಾಡುವವರೇ ಆಗಿದ್ದು, ಈ ನಿಟ್ಟಿನಲ್ಲಿ ವೀರಶೈವ ಸುಮಾರು 10 ಸಾವಿರ ವರ್ಷಗಳ ಪ್ರಾಚೀನ ಧರ್ಮವಾಗಿದೆ ಎಂದು ಬಳ್ಳಾರಿಯ ಹಿರಿಯ ಸಾಹಿತಿ, ಸಂಶೋಧಕ ಡಾ. ಚಿಕ್ಕ್ಯಾಟೆಮಠದ ವೀರಭದ್ರಯ್ಯ ಪ್ರತಿಪಾದಿಸಿದರು.

Rani Sathish

ಅಕ್ಕ ಸಮ್ಮೇಳನದ ಚಿಂತನಗೋಷ್ಠಿಯಲ್ಲಿ ಪ್ರಧಾನ ಉಪನ್ಯಾಸ ನೀಡಿ ಮಾತನಾಡಿದ ಅವರು, ವೀರಶೈವ-ಲಿಂಗಾಯತ ಧರ್ಮ, ಸಂಸ್ಕೃತಿ, ಪರಂಪರೆ ಬಹು ಪ್ರಾಚೀನವಾದುದು. ಇಲ್ಲಿ ಅರ್ಚನೆ, ಆರಾಧನೆ ಮತ್ತು ಅನುಷ್ಠಾನದ ಕೇಂದ್ರ ಬಿಂದು ‘ಇಷ್ಟಲಿಂಗ’ವೇ ಆಗಿದೆ. ಸಿಂಧೂಬಯಲಿನ ನಾಗರಿಕತೆಯ ಕಾಲಘಟ್ಟದಿಂದಲೂ ವೀರಶೈವ-ಲಿಂಗಾಯತ ಧರ್ಮ, ಸಂಸ್ಕೃತಿ, ಪರಂಪರೆಗೆ ಅನುಗುಣವಾದ ‘ಇಷ್ಟಲಿಂಗಾರ್ಚನೆ’ಯ ಆಚರಣೆ ಇತ್ತೆಂಬುದು ಸಂಶೋಧನೆಯಿಂದ ಸಾಬೀತಾಗಿದೆ. ಭಾರತದೆಲ್ಲೆಡೆ ಮತ್ತು ವಿದೇಶಗಳಲ್ಲಿ ಲಭ್ಯವಾದ ಅನೇಕ ಶಾಶನಗಳಲ್ಲಿ ವೀರಶೈವ ಧರ್ಮದ ಉಲ್ಲೇಖಗಳಿವೆ. ಶಾಶನಗಳು ಸಂಶೋಧನೆಗೆ ಅತ್ಯಂತ ನಿಖರ ಆಕರಗಳಾಗಿದ್ದು, ಶಾಶನೋಕ್ತ ವೀರಶೈವವನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.

ಲಿಂಗಾಂಗ ಸಾಮರಸ್ಯ

ವೀರಶೈವ-ಲಿಂಗಾಯತ ಧರ್ಮವು ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲ ತತ್ವಪ್ರಣೀತವಾದದ್ದು. ಇಲ್ಲಿ ಮೋಕ್ಷವನ್ನು ‘ಲಿಂಗಾಂಗ ಸಾಮರಸ್ಯ’ ಎಂದಿದ್ದಾರೆ. ಸಾಕ್ಷಾತ್ಕಾರ ಸಂಪಾದನೆ ಎಂದರೆ ಅದು ಅಂತಿಮವಾಗಿ ‘ಭಗವದ್ಬೆಳಗ’ನ್ನು ಕಾಣುವ ಹಂಬಲ. ವಿಶ್ವದಲ್ಲಿಯ ಎಲ್ಲಾ ಧರ್ಮಗಳ ಮೂಲ ಪ್ರತಿಪಾದನೆಯೂ ಕೂಡ ಇದೇ ಆಗಿದೆ ಎಂದೂ ಡಾ.ವೀರಭದ್ರಯ್ಯ ಹೇಳಿದರು.ಅಮೇರಿಕದ ಕಾವೇರಿ ಮತ್ತು ರಿಚ್ಮಂಡ್ ಕನ್ನಡ ಸಂಘಟನೆಗಳ ಹಾಗೂ 12ನೆಯ ಅಕ್ಕ ಸಮ್ಮೇಳನ ಸಮಿತಿಯ ವಿವಿಧ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net