

ಬೆಂಗಳೂರು: ಭಾದ್ರಪದ ಮಾಸದ ಮೊದಲನೇ ಮಂಗಳವಾರದ ನಿಮಿತ್ತ ನಗರದ ವಿವಿಧೆಡೆ ಶ್ರೀವೀರಭದ್ರ ದೇವರ ಜಯಂತಿಯನ್ನು ಆಚರಿಸಲಾಯಿತು.
ಕಾಶೀ ಪೀಠದಲ್ಲಿ ವೀರಭದ್ರ ಜಯಂತಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ದುಷ್ಟ ದುರಹಂಕಾರದ ರಾಕ್ಷಸೀ ಗುಣಸ್ವಭಾವಗಳ ನಿವಾರಣೆಗಾಗಿಯೇ ಶಿವಸಂಕಲ್ಪದಿಂದ ಅವತಾರವಾದ ವಿರಾಟರೂಪಿ ವೀರಭದ್ರ ದೇವರು ಅಪಾರ ಶಕ್ತಿಶಾಲಿ. ದಕ್ಷಬ್ರಹ್ಮನು ಹಮ್ಮಿಕೊಂಡಿದ್ದ ಶಿವನಿಂದಕ ಯಜ್ಞವನ್ನು ದ್ವಂಸಗೊಳಿಸುವ ಸಂದರ್ಭದಲ್ಲಿ ಯಜ್ಞ ಕುಂಡದಲ್ಲಿ ಉರಿಯುತ್ತಿದ್ದ ಅಗ್ನಿಯನ್ನು ತನ್ನ ಪಾದಗಳಿಂದ ತುಳಿದು ಶಾಂತಗೊಳಿಸಿದ. ಇದರ ದ್ಯೋತಕವಾಗಿಯೇ ವೀರಭದ್ರ ದೇವರ ಗುಗ್ಗಳ ಮಹೋತ್ಸವದಲ್ಲಿ ಪುರವಂತರು ತಮ್ಮ ಪಾದಗಳಿಂದ ಅಗ್ನಿ ಕುಂಡದಲ್ಲಿಯ ಬೆಂಕಿಯನ್ನು ತುಳಿಯುತ್ತಾರೆ. ಗುಗ್ಗಳದಲ್ಲಿ ಶಸ್ತ್ರ ಧಾರಣೆಯಿಂದ ಪುರವಂತರಿಗೆ ಮತ್ತು ಇತರೇ ಭಕ್ತರಿಗೆ ಯಾವುದೇ ನೋವು, ಗಾಯ, ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳದೇ ಇರುವುದು ವೀರಭದ್ರ ದೇವರ ಮಹಿಮೆಗೆ ಸಾಕ್ಷಿಯಾಗಿದೆ. ಅಂತಹ ಮಹಾಮಹಿಮರ ಜಯಂತಿಯನ್ನು ಭಾದ್ರಪದ ಮಾಸದ ಮೊದಲನೇ ಮಂಗಳವಾರದಂದು ಆಚರಿಸಲಾಗುತ್ತದೆ ಎಂದು ಹೇಳಿದರು.
ಬೆಂಗಳೂರಿನ ಪ್ರಾಚೀನ ವಿಭೂತಿಪುರ ವೀರಸಿಂಹಾಸ ಮಠದ ಶ್ರೀವೀರಭದ್ರಸ್ವಾಮಿ ದೇವಾಲಯದಲ್ಲಿ ಜಯಂತಿ ಅಂಗವಾಗಿ ವಿಶೇಷ ರುದ್ರಾಭಿಷೇಕ ಹಮ್ಮಿಕೊಳ್ಳಲಾಗಿತ್ತು. ಶ್ರೀಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಭದ್ರಕಾಳಿ ಸಮೇತ ವೀರಭದ್ರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶ್ರೀಗಳು ವೀರಭದ್ರ ಸ್ವಾಮಿಯು ಸನಾತನ ಧರ್ಮ ರಕ್ಷಣೆಗಾಗಿ ಅವತರಿಸಿದ ದೇವರು. ವೀರಭದ್ರ ಸ್ವಾಮಿಗೆ ಎಲ್ಲಿ ಪೂಜೆ ನಡೆಯುತ್ತದೆಯೋ ಅಲ್ಲಿ ಧರ್ಮ ನೆಲೆಗೊಳ್ಳುತ್ತದೆ. ವಿಭೂತಿಪುರದ ವೀರಭದ್ರ ಸ್ವಾಮಿ ಕ್ಷೇತ್ರವು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿದ್ದು, ನಾಡಪ್ರಭು ಕೆಂಪೇಗೌಡರ ವಂಶಸ್ಥರು ಜೀರ್ಣೋದ್ಧಾರ ಮಾಡಿದ ಇತಿಹಾಸವಿದೆ. ವೀರಭದ್ರನ ಜಯಂತಿ ಹಿನ್ನೆಲೆಯಲ್ಲಿ ನಾಡಿಗೆ ಕಲ್ಯಾಣವಾಗಲಿ ಎಂದು ಸಂಕಲ್ಪಿಸಿ ಪೂಜೆ ಮಾಡಲಾಗಿದೆ ಎಂದರು.
ಮಾಗಡಿ ರಸ್ತೆಯಲ್ಲಿರುವ ಮಾಚೋಹಳ್ಳಿ ಶ್ರೀಜೋಡಿ ರುದ್ರೇಶ್ವರ ದೇವಾಲಯದಲ್ಲಿ ವೀರಭದ್ರ ಜಯಂತಿ ಅಂಗವಾಗಿ ಪ್ರಾತಃಕಾಲ ಮಹಾರುದ್ರಾಭಿಷೇಕ ಹಾಗೂ ವಿಶೇಷ ಪೂಜೆಯನ್ನು ನೆರವೇರಿಸಿ ಬಂದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಇನ್ನುಳಿದಂತೆ ಕೆಂಪೇಗೌಡ ನಗರದಲ್ಲಿರುವ ಪುರಾತನ ಪ್ರಳಯ ಕಾಲದ ವೀರಭದ್ರ ದೇವಸ್ಥಾನ, ಕನ್ನಳ್ಳಿ ವೀರಭದ್ರೇಶ್ವರ ದೇವಸ್ಥಾನ, ತಿಂಡ್ಲು ವೀರಭದ್ರಸ್ವಾಮಿ ದೇವಾಲಯ, ಮಾಸ್ತೇನಹಳ್ಳಿ ವೀರಭದ್ರ ಕ್ಷೇತ್ರ ಹಾಗೂ ವಿವಿಧ ಸಂಘಟನೆಗಳು ವೀರಭದ್ರ ಜಯಂತಿಯನ್ನು ಆಚರಿಸಿದವು.